ಮಂಗಳೂರು : 14 ವರ್ಷಗಳ ಹಿಂದೆ ಹೂಡಿದ ಖಾಸಗಿ ದಾವೆಯೊಂದಕ್ಕೆ ಸಂಬಂಧಿಸಿ ನ್ಯಾಯಾಲಯಕ್ಕೆ ಸತತವಾಗಿ ಗೈರು ಹಾಜರಾಗಿದ್ದ ಮಂಗಳೂರಿನ ನಿವೃತ್ತ ಪೊಲೀಸ್ ಅಧಿಕಾರಿ ಜಯಂತ್ ಶೆಟ್ಟಿ ವಿರುದ್ಧ ಮಂಗಳೂರಿನ ಅಡಿಷನಲ್ ಸೀನಿಯರ್ ಸಿವಿಲ್ ನ್ಯಾಯಾಲಯವು ಜಾಮೀನು ರಹಿತ ವಾರೆಂಟ್ ಹೊರಡಿಸಿದೆ.
ಸಾಮಾಜಿಕ ಕಾರ್ಯಕರ್ತ ಕಬೀರ್ ಉಳ್ಳಾಲ್ 14 ವರ್ಷಗಳ ಹಿಂದೆ ತನ್ನನ್ನು ಬಂಧಿಸಿದ್ದನ್ನು ಪ್ರಶ್ನಿಸಿ ಮಂಗಳೂರಿನ ಕೋರ್ಟಿನಲ್ಲಿ ಖಾಸಗಿ ದಾವೆ ಹೂಡಿದ್ದರು. ಪ್ರಕರಣದಲ್ಲಿ ಜಯಂತ್ ಶೆಟ್ಟಿ ವಿರುದ್ಧ ಸಮನ್ಸ್ ಜಾರಿಯಾದರೂ ನ್ಯಾಯಾಲಯಕ್ಕೆ ಹಾಜರಾಗದೆ ತಪ್ಪಿಸಿಕೊಂಡ ಕಾರಣಕ್ಕೆ ಜಾಮೀನು ರಹಿತ ವಾರೆಂಟ್ ಜಾರಿ ಮಾಡಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕಬೀರ್ ಉಳ್ಳಾಲ್, ಪೊಲೀಸ್ ದೌರ್ಜನ್ಯ ವಿರುದ್ಧ ಕಾನೂನು ಹೋರಾಟ ನಡೆಸಿದ್ದಕ್ಕಾಗಿ ನನ್ನನ್ನು ಟಾರ್ಗೆಟ್ ಮಾಡಲಾಗಿತ್ತು. 2008ರಲ್ಲಿ ಉಳ್ಳಾಲದಲ್ಲಿ ನಡೆದ ಕೋಮುಗಲಭೆಗೆ ಸಂಬಂಧಿಸಿ ನನ್ನನ್ನು ಪೊಲೀಸರು ಬಂಧಿಸಿ, ಬಳ್ಳಾರಿ ಜೈಲಿಗೆ ತಳ್ಳಿದ್ದರು. ಬಳಿಕ ಜಾಮೀನಿನಲ್ಲಿ ಬಿಡುಗಡೆಗೊಂಡು ಜಯಂತ್ ಶೆಟ್ಟಿ ಮತ್ತು ಉಳ್ಳಾಲ ಪಿಎಸ್ಐ ಶಿವಪ್ರಕಾಶ್ ವಿರುದ್ಧ ನ್ಯಾಯಾಲಯದಲ್ಲಿ ಖಾಸಗಿ ದೂರು ದಾಖಲಿಸಿದ್ದಾಗಿ ಕಬೀರ್ ತಿಳಿಸಿದ್ದಾರೆ.
ಇನ್ನು, ಕೋರ್ಟಿನಲ್ಲಿ ಸತತ ಹೋರಾಟ ನಡೆಸಿದ ಫಲವಾಗಿ ಶಿವಪ್ರಕಾಶ್ ಜಾಮೀನು ಪಡೆದರೆ, ಜಯಂತ್ ಶೆಟ್ಟಿ ನ್ಯಾಯಾಲಯಕ್ಕೆ ಹಾಜರಾಗದೆ ತಪ್ಪಿಸಿಕೊಂಡಿದ್ದರು. ಪದೇ ಪದೇ ವಿಚಾರಣೆಗೆ ಹಾಜರಾಗಲು ಸಮನ್ಸ್ ನೀಡಿದ್ದರೂ, ಬರದೇ ಇರುವುದರಿಂದ ಜೂ.20ರಂದು ಮಂಗಳೂರಿನ ನ್ಯಾಯಾಲಯ ಜಯಂತ್ ಶೆಟ್ಟಿ ವಿರುದ್ಧ ಜಾಮೀನು ರಹಿತ ವಾರೆಂಟ್ ಜಾರಿಗೊಳಿಸಿದೆ ಎಂದು ತಿಳಿಸಿದ್ದಾರೆ.