Friday, November 22, 2024

ಬೊಮ್ಮಾಯಿ ರಿಮೋಟ್ ಕಂಟ್ರೋಲ್ ಸಿಎಂ : ಹೆಚ್.ಡಿ. ಕುಮಾರಸ್ವಾಮಿ

ಹಾಸನ : ಕರ್ನಾಟಕದಲ್ಲಿ‌ ಮುಂದಿನ ಹನ್ನೊಂದು ತಿಂಗಳಲ್ಲಿ ಹನ್ನೊಂದು ಬಾರಿ ಮೋದಿ ಬರಬಹುದು ಎಂದು ಹಾಸನದಲ್ಲಿ ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ.

ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೊಮ್ಮಾಯಿ ವಿರೋಧ ಪಕ್ಷಗಳಿಗೆ ನಮ್ಮನ್ನು ಟೀಕಿಸುವುದೇ ಕೆಲಸ ಎಂದಿದ್ದಾರೆ. ಈ ಹಿಂದೆ ಕೇಂದ್ರ ಸರ್ಕಾರಗಳ ಆಧಾರ್, ಜಿಎಸ್‌ಟಿ ಬಗ್ಗೆ ಮೊದಲು ವಿರೋಧಿಸಿದ್ದು ಯಾರು.? ಇಂದು ದೇಶದ ರಾಜಧಾನಿಯಲ್ಲಿ ಮನೆಗಳಿಲ್ಲದೆ ಫ್ಲೈ ಓವರ್ ಕೆಳಗೆ ಮಲಗುವ ಪರಿಸ್ಥಿತಿ ಇದೆ. ನಾಲ್ಕು ದಿನಗಳ ಹಿಂದೆ ಫ್ಲೈ ಓವರ್ ಕೆಳಗೆ ಬಿದ್ದು ಇಬ್ಬರು ಮಕ್ಕಳು ಸಾವಿಗೀಡಾಗಿದ್ದಾರೆ ಇದು ಪ್ರಗತಿಯಾ..? ಎಂದು ಪ್ರಶ್ನಿಸಿದರು.

ಅದಲ್ಲದೇ, ಬೆಂಗಳೂರಿನಲ್ಲಿ ಒಬ್ಬ ಇಂಜಿನಿಯರ್ ರಾಜ ಕಾಲುವೆಯಲ್ಲಿ ಕೊಚ್ಚಿಹೋದನಲ್ಲ ಇದು ಪ್ರಗತಿಯಾ..? ಕಳಪೆ ಕಾಮಗಾರಿಯಿಂದ ಈ ರೀತಿ ಅವಘಡ ಸಂಭವಿಸಿವೆ ಈ ಬಗ್ಗೆ ಯಾಕೆ ಚರ್ಚೆ ಆಗಲಿಲ್ಲ. ವಿರೋಧ ಪಕ್ಷಗಳನ್ನ ಟೀಕೆ ಮಾಡುವ ನಿಮ್ಮ ಜಾಯಮಾನವನ್ನ ನಿಲ್ಲಿಸಿ. ಪ್ರತಿಯೊಂದು ಸರ್ಕಾರ ಬಂದಾಗಲೂ ಅವರ ಜವಾಬ್ದಾರಿ ತೋರುತ್ತವೆ. ಮಹಾರಾಷ್ಟ್ರದಲ್ಲಿ ಆಪರೇಷನ್ ಕಮಲ ಮಾಡುತ್ತಿದ್ದೀರಲ್ಲ ಇದು ಪ್ರಜಾಪ್ರಭುತ್ವವಾ..? ಈ ದೇಶದ ಪ್ರಜಾಪ್ರಭುತ್ವ ವಿಚಾರವನ್ನ ಎಲ್ಲಿಗೆ ತೆಗೆದುಕೊಂಡು ಹೋಗುತ್ತಿದ್ದೀರಿ. ರೈತರ ಬದುಕನ್ನ ಕಳೆದ ಎಂಟು ವರ್ಷಗಳಲ್ಲಿ ಯಾವುದೇ ಬದಲಾಗಲಿಲ್ಲ ಎಂದರು.

ಕರ್ನಾಟಕದಲ್ಲಿ‌ ಮುಂದಿನ ಹನ್ನೊಂದು ತಿಂಗಳಲ್ಲಿ ಹನ್ನೊಂದು ಬಾರಿ ಮೋದಿ ಬರಬಹುದು. ಕರ್ನಾಟಕಕ್ಕೆ ನೆರೆ, ಕೋವಿಡ್ ಸಂದರ್ಭದಲ್ಲಿ ಬರಲಿಲ್ಲ. ಜನರು ಎಲ್ಲವನ್ನೂ ಯೋಚಿಸಿ ತೀರ್ಮಾನ ಕೈಗೊಳ್ಳಬೇಕು. ಮೋದಿ ಬಂದುಹೋಗಿದ್ದಕ್ಕೆ ೩೨ ಕೋಟಿ ಖರ್ಚಾಗಿದೆ ಎನ್ನುತ್ತಿದ್ದಾರೆ. ಈ ಹಣದಿಂದ ಒಂದು ಗ್ರಾಮ ಪಂಚಾಯತಿ ಉದ್ದಾರ ಮಾಡಬಹುದಿತ್ತು. ದೇವೇಗೌಡರು ಪ್ರಧಾನಿ ಆಗಿದ್ದಾಗ ಕರ್ನಾಟಕಕ್ಕೆ ಬಂದು ಹೋಗಿದ್ದಕ್ಕೆ ಟೀಕಿಸುತ್ತಿದ್ದರು. ಪಠ್ಯಕ್ರಮ ವಿಚಾರವಾಗಿ ದೇವೇಗೌಡರು ಪತ್ರ ಬರೆದಿದ್ದಾರೆ. ಈ ಬಗ್ಗೆ ಬೊಮ್ಮಾಯಿಯವರೂ ಸಭೆ ಕರೆಯುವುದಾಗಿ ಹೇಳಿದ್ದಾರೆ. ಬೊಮ್ಮಾಯಿ ರಿಮೋಟ್ ಕಂಟ್ರೋಲ್ ಸಿಎಂ. ಎಲ್ಲವೂ ಕೇಶವಕೃಪದಲ್ಲೇ ತೀರ್ಮಾನವಾಗುತ್ತದೆ. ಬೊಮ್ಮಾಯಿ ಬಗ್ಗೆ ನನಗೆ ಕನಿಕರವಿದೆ ಎಂದು ಹೇಳಿದ್ದಾರೆ.

RELATED ARTICLES

Related Articles

TRENDING ARTICLES