ಧಾರವಾಡ : ಇಂದು ಬೆಳಿಗ್ಗೆ ಧಾರವಾಡ ಅಕ್ಷರಷ: ರಣಾಂಗಣವಾಗಿತ್ತು. ಅಗ್ನಿಪಥ ಯೋಜನೆ ವಿರೋಧಿಸಿ ಯುವಕರು ಬಿದಿಗಿಳಿದಿದ್ದರು. ಧಾರವಾಡ ಬೆಳಗಾವಿ ರಸ್ತೆ ಬಂದ ಮಾಡಿ ಪ್ರತಿಭಟನೆ ನಡೆಸುತ್ತಿದ್ದ ಯುವಕರು ಜಿಲ್ಲಾಧಿಕಾರಿ ಕಚೇರಿಗೆ ಬರಲು ಸಜ್ಜಾಗಿದ್ದರು. ಈ ವೇಳೆ ಸ್ಥಳಕ್ಕೆ ಬಂದ ಪೊಲೀಸರು ಜಿಲ್ಲಾಧಿಕಾರಿಗಳನ್ನು ಇಲ್ಲಿಯೇ ಕರೆಸುತ್ತೇವೆ ಎಂದು ಹೇಳಿ ಸಮಾಧಾನಪಡಿಸಿದ್ದರು. ಅಪರ ಜಿಲ್ಲಾಧಿಕಾರಿ ಸ್ಥಳಕ್ಕೆ ಬಂದು ಮನವಿ ಸ್ವೀಕರಿಸಿ ಹೋಗುತ್ತಿದ್ದಂತೆ ಮತ್ತೊಂದು ತಂಡ ಘೋಷಣೆ ಕೂಗುತ್ತ ಬಂತು. ಪ್ರತಿಭಟನೆ ಮುಗಿಸುವಂತೆ ಪೊಲೀಸರು ಎಷ್ಟೇ ಮನವಿ ಮಾಡಿದರು ಸಹ ಇನ್ನೂರುರಷ್ಟಿದ್ದ ಯುವಕರ ಗುಂಪು ಮತ್ತೆ ರಸ್ತೆ ತಡೆ ನಡೆಸಿದ್ರು. ಇನ್ನೇನು ಪರಿಸ್ಥಿತಿ ಕೈತಪ್ಪಿ ಹೋಗುತ್ತಿದೆ ಎಂದು ತಿಳಿದ ಪೊಲೀಸರು ಲಾಟಿ ರುಚಿ ತೋರಿಸಿದ್ರು. ಪೊಲೀಸರು ಲಾಟಿ ಬಿಸುತ್ತಿದ್ದಂತೆ ಉದ್ರಿಕ್ತ ಗುಂಪು ಕಲ್ಲು ತೂರಾಟ ನಡೆಸಿತು. ಪರಿಣಾಮ ಬಸ್ಸಿನ ಗಾಜು ಪುಡಿ ಪುಡಿಯಾಯ್ತು.
ಅಲ್ಲಿಂದ ಚದುರಿದ ಯುವಕರ ಗುಂಪು 4 ತಂಡಗಳಾಗಿ ಮತ್ತೆ ಪ್ರತಿಭಟನೆಗೆ ಇಳಿಯಿತು. ಪೊಲೀಸರಿಗೆ ಅವರನ್ನು ನಿಯಂತ್ರಣ ಮಾಡಲು ಹರಸಾಹಸಪಡಬೇಕಾಯಿತು. ಜಿಲ್ಲಾಧಿಕಾರಿ ಕಚೇರಿ, ಮರಾಠಾ ಕಾಲನಿ, ಕಡಪಾ ಮೈದಾನದಲ್ಲಿ ಪ್ರತ್ಯೇಕ ಹೋರಾಟ ನಡೆಸಿ ಪೊಲೀಸರಿಗೆ ಸವಾಲೆಸೆದರು. ತಕ್ಷಣ ಸ್ಥಳಕ್ಕೆ ಬಂದ ಪೊಲೀಸ್ ಆಯುಕ್ತ ಲಾಬುರಾಮ್ ಮತ್ತಷ್ಟು ಪೊಲೀಸ್ ಪಡೆಗಳನ್ನು ನಿಯುಕ್ತಿಗೊಳಿಸಿದ್ರು. ಈ ವೇಳೆ ಮಾತನಾಡಿದ ಪೊಲೀಸ್ ಆಯುಕ್ತ ಲಾಬುರಾಮ್, ಘಟನೆಗೆ ಸಂಬಂಧಿಸಿದಂತೆ 30 ಜನರನ್ನು ವಶಕ್ಕೆ ಪಡೆಯಲಾಗಿದ್ದು, ಪರಿಸ್ಥಿತಿ ಹತೋಟಿಯಲ್ಲಿದೆ ಎಂದು ತಿಳಿಸಿದ್ರು.
ಮುಸ್ತಫಾ ಕುನ್ನಿಭಾವಿ, ಪವರ್ ಟಿವಿ ಧಾರವಾಡ