ಅಸ್ಸಾಂ : ಸತತ ಐದನೇ ದಿನವೂ ಭಾರಿ ಮಳೆ ಮುಂದುವರೆದ ಪರಿಣಾಮ ಅಸ್ಸಾಂ ಸೇರಿದಂತೆ ಈಶಾನ್ಯ ರಾಜ್ಯಗಳಲ್ಲಿ ಪ್ರವಾಹ ಪರಿಸ್ಥಿತಿ ಮುಂದುವರೆದಿದೆ. ಎಲ್ಲಾ ನದಿಗಳೂ ಉಕ್ಕೇರಿ ಹರಿಯುತ್ತಿರೋದ್ರಿಂದ ಜನಜೀವನ ಅಸ್ತವ್ಯಸ್ತಗೊಂಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಅಸ್ಸಾಂನ 25 ಜಿಲ್ಲೆಗಳಲ್ಲಿ 11 ಲಕ್ಷಕ್ಕೂ ಅಧಿಕ ಜನರು ಪ್ರವಾಹದಿಂದ ತೊಂದರೆಗೀಡಾಗಿದ್ದಾರೆ. ಅಲ್ಲದೇ ಮೇಘಾಲಯ ಮತ್ತು ಅರುಣಾಚಲ ಪ್ರದೇಶಗಳಲ್ಲೂ ಪ್ರವಾಹ ಸ್ಥಿತಿ ನಿರ್ಮಾಣವಾಗಿದ್ದು, ಭೂಕುಸಿತ ಸಂಭವಿಸಿದೆ. ಇದರಿಂದಾಗಿ ಹಲವು ರಸ್ತೆಮಾರ್ಗಗಳು ಹಾಳಾಗಿದ್ದು, ಹಲವು ಗ್ರಾಮಗಳು ಸಂಪರ್ಕ ಕಳೆದುಕೊಂಡಿವೆ. ಅಸ್ಸಾಂನ ದಿಮಾ ಹಸಾವೋ, ಗೋಲ್ಪಾರಾ, ಹೊಜಾಯ್, ಕಮ್ರುಪ್‌ಗಳಲ್ಲಿ ಭೂಕುಸಿತ ಸಂಭವಿಸಿದ್ದು, ಓರ್ವ ವ್ಯಕ್ತಿ ಪ್ರವಾಹದಲ್ಲಿ ಕೊಚ್ಚಿ ಹೋಗಿದ್ದಾನೆ..150 ನೆರವು ಕೇಂದ್ರಗಳಲ್ಲಿ 68 ಸಾವಿರಕ್ಕೂ ಹೆಚ್ಚು ಜನರಿಗೆ ಆಶ್ರಯ ಒದಗಿಸಲಾಗಿದೆ. ಈವರೆಗೆ ಸುಮಾರು 5,840 ಮಂದಿಯನ್ನು ಸುರಕ್ಷಿತವಾಗಿ ಸ್ಥಳಾಂತರಿಸಲಾಗಿದೆ.