ನವದೆಹಲಿ : ನ್ಯಾಷನಲ್ ಹೆರಾಲ್ಡ್ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಹಾಗೂ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿಗೆ ನೋಟಿಸ್ ನೀಡಿದೆ. ದೆಹಲಿಯ ಇಡಿ ಕಚೇರಿಯಲ್ಲಿ ರಾಹುಲ್ ಗಾಂಧಿ ಸತತ ಮೂರು ದಿನಗಳಿಂದ ವಿಚಾರಣೆ ಎದುರಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ತಮ್ಮ ಪಕ್ಷದ ನಾಯಕನ ಪರವಾಗಿ ಕಾಂಗ್ರೆಸ್ ದೇಶಾದ್ಯಂತ ಪ್ರತಿಭಟನೆ ನಡೆಸುತ್ತಿದ್ದು, ಇಂದು ರಾಜಭವನ ಚಲೋ ಹೆಸರಿನಲ್ಲಿ ಪ್ರತಿಭಟನೆ ನಡೆಸಿದ್ರು.
ನ್ಯಾಷನಲ್ ಹೆರಾಲ್ಡ್ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಹುಲ್ ಗಾಂಧಿ ವಿರುದ್ಧ ಎಫ್‌ಐಆರ್ ದಾಖಲಾಗಿಲ್ಲದಿದ್ದರೂ ಪ್ರತಿ ದಿನ ಹತ್ತು ಗಂಟೆಗೂ ಹೆಚ್ಚು ಕಾಲ ವಿಚಾರಣೆ ಮಾಡಲಾಗಿದೆ. ಕೇಂದ್ರ ಸರ್ಕಾರ ತನಿಖಾ ಸಂಸ್ಥೆಗಳಾದ ಜಾರಿ ನಿರ್ದೇಶನಾಲಯ, ಕೇಂದ್ರ ತನಿಖಾ ಸಂಸ್ಥೆ, ಆದಾಯ ತೆರಿಗೆ ಇಲಾಖೆಗಳನ್ನು ದುರುಪಯೋಗ ಮಾಡಿಕೊಳ್ಳುತ್ತಿದೆ ಎಂದು ಕಾಂಗ್ರೆಸ್ ಆರೋಪಿಸ್ತಿದೆ.
ರಾಹುಲ್ ಗಾಂಧಿ ಇಡಿ ವಿಚಾರಣೆ ವಿರೋಧಿಸಿ ಕಾಂಗ್ರೆಸ್ ಪ್ರತಿಭಟಿಸ್ತಿದೆ. ಆ ಸಮಯದಲ್ಲಿ ಕಾಂಗ್ರೆಸ್ ಸಂಸತ್ ಸದಸ್ಯರು ಬೆಂಬಲ ವ್ಯಕ್ತಪಡಿಸಿದ್ದೇವೆ. ನಮ್ಮ ಪಕ್ಷದ ಕಚೇರಿಗೆ ಹೋಗುವ ಸಮಯದಲ್ಲಿ ನಮ್ಮ ಮೇಲೆ ಹಲ್ಲೆ ನಡೆಸಲಾಗ್ತಿದೆ. ಸಂವಿಧಾನದಲ್ಲಿನ ನಮ್ಮ ಹಕ್ಕುಗಳನ್ನು ಪೊಲೀಸರು ಕಿತ್ತುಕೊಂಡಿದ್ದಾರೆ. ಪೊಲೀಸ್ ಠಾಣೆಗಳಲ್ಲಿ ನಮ್ಮ ಮೇಲೆ ಕೇಸ್ ಹಾಕಲಾಗಿದೆ. ಹಾಗಾಗಿ, ನಮ್ಮ ರಕ್ಷಣೆಗೆ ಸಂಸತ್ ಸ್ಪೀಕರ್ ಬರಬೇಕೆಂದು ಲೋಕಸಭೆ ಕಾಂಗ್ರೆಸ್ ನಾಯಕ ಅಧೀರ್ ರಂಜನ್ ನೇತೃತ್ವದಲ್ಲಿ ಸ್ಪೀಕರ್ ಓಂ ಬಿರ್ಲಾ ಅವರಿಗೆ ಮನವಿ ಮಾಡಲಾಗಿದೆ.
ರಾಹುಲ್ ಗಾಂಧಿಯನ್ನು ಜಾರಿ ನಿರ್ದೇಶನಾಲಯ ವಿಚಾರಣೆ ಮಾಡುತ್ತಿರುವ ವಿಷಯಕ್ಕೆ ಸಂಬಂಧಿಸಿದಂತೆ ದೇಶಾದ್ಯಂತ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸುತ್ತಿದ್ದಾರೆ. ತೆಲಂಗಾಣ ಕಾಂಗ್ರೆಸ್ ನಾಯಕಿ ಹಾಗು ಮಾಜಿ ಸಚಿವೆ ರೇಣುಕಾ ಚೌಧರಿ ಅವರೂ ಕೂಡಾ ಪ್ರತಿಭಟನೆಗೆ ಇಳಿದಿದ್ದಾರೆ. ಹೋರಾಟದ ವೇಳೆ ನಾಯಕಿಯನ್ನು ವಶಕ್ಕೆ ಪಡೆಯಲು ಬಂದಾಗ ಅವರು ಪೊಲೀಸ್ ಅಧಿಕಾರಿಯ ಕಾಲರ್ ಹಿಡಿದು ದರ್ಪ ತೋರಿಸಿದರು. ಇನ್ನೊಂದೆಡೆ, ಕಾಂಗ್ರೆಸ್ ಹಮ್ಮಿಕೊಂಡಿದ್ದ ರಾಜಭವನ ಚಲೋ ಹಿಂಸಾಚಾರಕ್ಕೆ ತಿರುಗಿದ್ದು, ಕಾರ್ಯಕರ್ತರು ಸ್ಕೂಟರ್‌ಗೆ ಬೆಂಕಿ ಹಚ್ಚಿ, ಟಿಎಸ್‌ಆರ್‌ಟಿಸಿ ಬಸ್ ಗ್ಲಾಸ್‌ಗಳನ್ನೂ ಒಡೆದಿದ್ದಾರೆ. ಟಿಪಿಸಿಸಿ ಅಧ್ಯಕ್ಷ ರೇವಂತ್ ರೆಡ್ಡಿ, ಸಿಎಲ್‌ಪಿ ನಾಯಕ ಮಲ್ಲು ಭಟ್ಟಿ ವಿಕ್ರಮಾರ್ಕ ಮತ್ತಿತರರನ್ನು ಪೊಲೀಸರು ಬಂಧಿಸಿದ್ದಾರೆ.
ಈ ಮಧ್ಯೆ, ಮುಂದಿನ ಹೋರಾಟದ ರೂಪು-ರೇಷೆಗಳ ಬಗ್ಗೆ ದೆಹಲಿಯಲ್ಲಿ ಕಾಂಗ್ರೆಸ್ ಹಿರಿಯ ನಾಯಕರ ಸಭೆ ನಡೀತು. ED ವಿಚಾರದಲ್ಲಿ ಪಕ್ಷ ಯಾವ ನಿಲುವು ತೆಗೆದುಕೊಳ್ಳಬೇಕು ಎಂಬ ಬಗ್ಗೆ ನಿಲುವು ತೆಗೆದುಕೊಳ್ಳಲಾಯ್ತು..
ಈಗಾಗಲೇ ಮೂರು ದಿನ ವಿಚಾರಣೆಗೆ ಹಾಜರಾಗಿರುವ ರಾಹುಲ್ ಗಾಂಧಿಗೆ ವಿರಾಮ ನೀಡಲಾಗಿತ್ತು. ಮತ್ತೆ ಶುಕ್ರವಾರ ವಿಚಾರಣೆಗೆ ಬರುವಂತೆ ಸೂಚನೆ ನೀಡಲಾಗಿದೆ. ಆದ್ರೆ, ಇಡಿ ಅಧಿಕಾರಿಗಳು ನೀಡಿರುವ ಸೂಚನೆಯನ್ನು ರಾಹುಲ್ ಗಾಂಧಿ ಯತವತ್ತಾಗಿ ಪಾಲಿಸಿ, ಆದಷ್ಟು ಬೇಗ ಇಡಿ ಅಧಿಕಾರಿಗಳ ಇಕ್ಕಳದಿಂದ ಹೊರ ಬರ್ತರಾ ಅಂತಾ ಕಾದುನೋಡಬೇಕು.
ಸಂತೋಷ್ ಹೊಸಹಳ್ಳಿ, ಪವರ್ ಟಿವಿ, ನವದೆಹಲಿ.