ಬೆಂಗಳೂರು: ರಾಜಕಾರಣಿಗಳು ವರಿಷ್ಠರನ್ನು ಮೆಚ್ಚಿಸಲು ಹೋಗಿ ಒಂದಿಲ್ಲೊಂದು ಎಡವಟ್ಟುಗಳನ್ನು ಮಾಡಿಕೊಳ್ತಾನೆ ಇರ್ತಾರೆ. ಆದ್ರೆ ಇಲ್ಲಿ ಶಿಕ್ಷಣ ಇಲಾಖೆಯ ಅಧಿಕಾರಿಯೇ ಯಾರನ್ನೋ ಮೆಚ್ಚಿಸಲು ಹೋಗಿ ಮಹಾ ಎಡವಟ್ಟು ಮಾಡಿಕೊಂಡಿದ್ದಾರೆ.
ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ ನಿಮಿತ್ತ ‘ಒಂದು ಭಾರತ-ಶ್ರೇಷ್ಠ ಭಾರತ’ ಕಾರ್ಯಕ್ರಮದಡಿ ಪ್ರೌಢಶಾಲೆ & ಪಿಯುಸಿ ವಿದ್ಯಾರ್ಥಿಗಳನ್ನು ಹೊರ ರಾಜ್ಯಗಳ ಪ್ರವಾಸಕ್ಕೆ ಆಯೋಜಿಸಲಾಗಿದೆ. ಇದಕ್ಕೆ ಕರೆದೊಯ್ಯಲು ಕನ್ನಡ ಮಾತ್ರ ಮಾತನಾಡುವ ವಿದ್ಯಾರ್ಥಿಗಳನ್ನು ಕಡೆಗಣಿಸಿ ಹಿಂದಿ ಮಾತನಾಡುವ ವಿದ್ಯಾರ್ಥಿಗಳನ್ನೇ ಆಯ್ಕೆ ಮಾಡುವಂತೆ ಆದೇಶಿಸಲಾಗಿದೆ. ಈ ಅದೇಶವನ್ನು ಬೆಂಗಳೂರು ಡಿಡಿಪಿಐ ಮಾಡಿದ್ದು ಎಲ್ಲರ ಆಕ್ರೋಶಕ್ಕೆ ಕಾರಣವಾಗಿದೆ.
ಮಾಧ್ಯಮಗಳಲ್ಲಿ ವರದಿಯಾಗಿರುವ ಈ ಆಘಾತಕಾರಿ ಸುದ್ದಿ ನನಗೆ ತೀವ್ರ ಕಳವಳ ಉಂಟು ಮಾಡಿದೆ. ಹಿಂದಿ ಮಾತನಾಡುವ ವಿದ್ಯಾರ್ಥಿಗಳನ್ನು ಮಾತ್ರ ಪ್ರವಾಸಕ್ಕೆ ಆಯ್ಕೆ ಮಾಡುವಂತೆ ಬೆಂಗಳೂರು ಡಿಡಿಪಿಐ ಆದೇಶ ನೀಡಿರುವುದು ಕನ್ನಡಕ್ಕೆ ಬಗೆದಿರುವ ಘೋರ ದ್ರೋಹ. ಈ ಕೂಡಲೇ ಅಧಿಕಾರಿಯನ್ನು ಅಮಾನತು ಮಾಡಿ ಆದೇಶ ವಾಪಸ್ ಪಡೆಯುವಂತೆ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಆಗ್ರಹಿಸಿದ್ದಾರೆ.
ಈ ಆದೇಶಕ್ಕೆ ಸರ್ಕಾರವೇ ನೇರ ಹೊಣೆ ಮತ್ತು ಶಿಕ್ಷಣ ಸಚಿವರು ಹೊಣೆ ಹೊರಬೇಕು ಎಂದು ವಿಪಕ್ಷಗಳು ಆಗ್ರಹಿಸಿವೆ. ಬಿಜೆಪಿ ಮೊದಲಿನಿಂದಲೂ ಹಿಂದಿ ಹೇರಿಕೆ ಮಾಡುತ್ತಿದೆ. ಇದು ಕನ್ನಡ ದ್ರೋಹ. ಆದರೆ
ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಟ್ವೀಟ್ ಮಾಡಿ ಭಾರತ ಸ್ವಾತಂತ್ರ್ಯದ ಅಮೃತ ಮಹೋತ್ಸವ ಅಂಗವಾಗಿ ಕರ್ನಾಟಕದಿಂದ ಹೊರ ರಾಜ್ಯಕ್ಕೆ ಪ್ರವಾಸಕ್ಕೆ ತೆರಳುವ ವಿದ್ಯಾರ್ಥಿಗಳಿಗೆ ಹಿಂದಿ ಮತ್ತು ಇಂಗ್ಲಿಷ್ ಭಾಷೆ ಜ್ಞಾನ ಕಡ್ಡಾಯ ಎಂಬ ಸೂಚನೆಯನ್ನು ಕೇಂದ್ರ ಅಥವಾ ರಾಜ್ಯ ಸರ್ಕಾರವಾಗಲಿ ನೀಡಿಲ್ಲ. ಈ ಗೊಂದಲಕ್ಕೆ ಕಾರಣವಾದ ಅಧಿಕಾರಿ ಹಾಗು ಸಿಬ್ಬಂದಿ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಬಿ.ಸಿ.ನಾಗೇಶ್ ಸ್ಪಷ್ಟನೆ ನೀಡಿದ್ರು.
ಒಟ್ಟಿನಲ್ಲಿ ಪಠ್ಯ ಪುಸ್ತಕ ಪರಿಷ್ಕರಣೆ ಮಾಡಿ ವಿವಿಧ ಸಮುದಾಯಗಳ ಕೆಂಗಣ್ಣಿಗೆ ಶಿಕ್ಷಣ ಇಲಾಖೆ ಗುರಿಯಾಗಿತ್ತು. ಇದೀಗ ಮತ್ತೆ ಕನ್ನಡ ವಿರೋಧಿ ಆದೇಶ ಹೊರಡಿಸಿ ಕನ್ನಡಿಗರನ್ನ ಕೆರಳಿಸಿದೆ. ಅತಿ ಸೂಕ್ಷ್ಮ ಇಲಾಖೆ ಅಂತ ಕರೆಸಿಕೊಳ್ಳುವ ಶಿಕ್ಷಣ ಇಲಾಖೆ ಇನ್ನಾದ್ರೂ ಎಡವಟ್ಟು ಮಾಡಿಕೊಳ್ಳೋದನ್ನು ಬಿಟ್ಟು ಮಕ್ಕಳ ಮೇಲೆ ಗಮನ ಹರಿಸಬೇಕಿದೆ.
ರೂಪೇಶ್ ಬೈಂದೂರು, ಪವರ ಟಿವಿ, ಬೆಂಗಳೂರು