ನವದೆಹಲಿ: ನ್ಯಾಷನಲ್ ಹೆರಾಲ್ಡ್ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ (ಇ.ಡಿ) ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರನ್ನು ಎರಡನೇ ದಿನವಾದ ಇಂದು ವಿಚಾರಣೆಗೆ ಒಳಪಡಿಸಿದೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಹುಲ್ ಗಾಂಧಿ ಅವರನ್ನು ಜಾರಿ ನಿರ್ದೇಶನಾಲಯ ಸೋಮವಾರ 10 ಗಂಟೆಗಳ ಕಾಲ ವಿಚಾರಣೆ ನಡೆಸಿತ್ತು. ಎರಡನೇ ದಿನವಾದ ಇಂದು ಮತ್ತೆ ರಾಹುಲ್ ಗಾಂಧಿ ದೆಹಲಿಯ ಎ.ಪಿ.ಜೆ ಅಬ್ದುಲ್ ಕಲಾಂ ರಸ್ತೆಯಲ್ಲಿರುವ ಜಾರಿ ನಿರ್ದೇಶನಾಲಯ ಪ್ರಧಾನ ಕಚೇರಿಗೆ ಆಗಮಿಸಿದರು. ಸದ್ಯ ಅವರ ವಿಚಾರಣೆ ನಡೆಯುತ್ತಿದೆ.
ರಾಹುಲ್ ಗಾಂಧಿ ಅವರು ತಮ್ಮ Z+ ವರ್ಗದ ಭದ್ರತಾ ಬೆಂಗಾವಲಿನೊಂದಿಗೆ ಜಾರಿ ನಿರ್ದೇಶನಾಲಯ ಪ್ರಧಾನ ಕಚೇರಿಗೆ ಆಗಮಿಸಿದರು. ಅವರೊಂದಿಗೆ ಸಹೋದರಿ ಮತ್ತು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಕೂಡ ಇದ್ದರು.
ವಿಚಾರಣೆ ವಿರುದ್ಧ ದೇಶದಾದ್ಯಂತ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸುವ ಮೂಲಕ ತಮ್ಮ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಸೋಮವಾರದಂತೆಯೇ ಇ.ಡಿ ಕಚೇರಿ ಸುತ್ತಲೂ ಸೆಕ್ಷನ್ 144 ಹೇರಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ರಾಹುಲ್ ಗಾಂಧಿ ಅವರ ಹೇಳಿಕೆಗಳನ್ನು ಪಿಎಂಎಲ್‌ಎ ಕಾಯ್ದೆ ಅಡಿಯಲ್ಲಿ ದಾಖಲು ಮಾಡಿಕೊಳ್ಳಲಾಗುತ್ತಿದೆ. ಸೋಮವಾರ ವಿಚಾರಣೆ ಪೂರ್ಣಗೊಳಿಸಲು ಸಾಧ್ಯವಾಗದ ಕಾರಣ ಇಂದು ಅವರನ್ನು ಮತ್ತೆ ಕರೆಸಲಾಗಿದೆ ಎಂದು ಇ.ಡಿಯ ಹಿರಿಯ ಅಧಿಕಾರಿಗಳು ಹೇಳಿದ್ದಾರೆ.
National Herald case: ED questions Rahul Gandhi on 2nd consecutive day
Read @ANI Story | https://t.co/e8Zy8euzq1#RahulGandhi #NationalHeraldCase #Congress pic.twitter.com/tvswYfhVT6
— ANI Digital (@ani_digital) June 14, 2022