ತುಮಕೂರು : ಅಲ್ಲಲ್ಲಿ ಬಿದ್ದಿರೋ ಮದ್ಯದ ಪ್ಯಾಕೇಟ್, ಬೇಲಿ ಬೆಳೆದು ನಿಂತಿರೋ ಕಟ್ಟಡ, ಪ್ಲಾಸ್ಟಿಕ್ ಲೋಟಗಳು, ಪಾನ್ ಪರಾಗ್ ಕವರ್. ಇದೆಲ್ಲಾ ನೋಡಿ ಕನ್ಫ್ಯೂಸ್ ಆಗಬೇಡಿ. ಖಂಡಿತಾ ಇದು ಸರ್ಕಾರಿ ಶಾಲೆನೇ.., ಅಷ್ಟಕ್ಕೂ ಇದು ಇರೋದು ಬೇರೆಲ್ಲೂ ಅಲ್ಲ. ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ತವರು ಜಿಲ್ಲೆಯ ಮಾಜಿ ಡಿಸಿಎಂ ಡಾ.ಜಿ.ಪರಮೇಶ್ವರ್ ಸ್ವಕ್ಷೇತ್ರದಲ್ಲಿ.
ಕೊರಟಗೆರೆ ತಾಲೂಕಿನ ಕಬ್ಬಿಗೆರೆ ಸರ್ಕಾರಿ ಪ್ರಾಥಮಿಕ ಪಾಠಶಾಲೆ ದುಸ್ಥಿತಿ ದೇವರಿಗೇ ಪ್ರೀತಿ ಎಂಬಂತಾಗಿದೆ.ಈ ಹಿಂದೆ ಖಾತೆ ನಂ. 91ರಲ್ಲಿ ಭೂಧಾನ ನೀಡಿದ್ರು.ಸದ್ಯ ಅದೇ ಜಾಗದಲ್ಲಿ ಶಾಲೆ ತೊಂದರೆ ಇಲ್ಲದೇ ನಡೆದುಕೊಂಡು ಹೋಗ್ತಿತ್ತು. ಆದ್ರೆ, ಇದೀಗ ದಾನ ಕೊಟ್ಟ ಕುಟುಂಬದ ಜವರೇಗೌಡ ಎಂಬುವವರು ನಾವು ಕೊಟ್ಟಿದ್ದು 5 ಗುಂಟೆ ಜಮೀನು.ಅದನ್ನು ಬಿಟ್ಟು ಹೆಚ್ಚು ಜಾಗದಲ್ಲಿ ಕಟ್ಟಡ ಕಟ್ಟಿದ್ದೀರಿ ಎಂದು ಕಿರಿಕ್ ತೆಗೆದು ಯಾವುದೇ ಕಾಮಗಾರಿ ಶಾಲಾ ಆವರಣದಲ್ಲಿ ನಡೆಯದಂತೆ ತಡೆಯೊಡ್ಡಿದ್ದಾರೆ ಎಂದು ಸ್ಥಳೀಯರು ಆರೋಪ ಮಾಡುತ್ತಿದ್ದಾರೆ. ಇದೇ ವಿಚಾರವಾಗಿ ಶಾಲಾ SDMC ಹಾಗೂ ಶಿಕ್ಷಕ ವೃಂದ ತಹಸೀಲ್ದಾರ್ ಅವರಿಗೆ ಮನವಿ ಸಹ ಸಲ್ಲಿಸಿದ್ರೂ ಯಾವುದೇ ಪ್ರಯೋಜನವಾಗಿಲ್ಲ.
ಇನ್ನು ಶಾಲಾ ಕಟ್ಟಡ ಈಗಾಗಲೇ ಛಾವಣಿ ಉದುರುತ್ತಿದ್ದು, ಮಕ್ಕಳು ಕೆಳಗೆ ಕೂರಲು ಆತಂಕ ವ್ಯಕ್ತಪಡಿಸುತ್ತಿದ್ದಾರೆ. ಅಲ್ಲದೆ, ರಾತ್ರಿ ವೇಳೆ ಕುಡುಕರು ಶಾಲಾ ಆವರಣದಲ್ಲೇ ಮದ್ಯ ಕುಡಿದು ಶಾಲಾ ಕೊಠಡಿ ಮುಂಭಾಗವೇ ಕಸ ಹಾಕಿ ಹೋಗುತ್ತಿದ್ದು, ಮಕ್ಕಳೇ ಇದನ್ನ ಸ್ವಚ್ಛ ಮಾಡುವ ಸ್ಥಿತಿ ಬಂದಿದೆ.
ಅದೇನೇ ಇರಲಿ ಸರ್ಕಾರಿ ಶಾಲೆ ಅಂದ್ರೆ ಮೂಗು ಮುರಿಯೋ ಈ ಕಾಲದಲ್ಲಿ ಸರ್ಕಾರಿ ಶಾಲೆಗೆ ಬರುವ ಮಕ್ಕಳ ಉಳಿವಿಗಾಗಿ ಸರ್ಕಾರ ಕೂಡಲೇ ಈ ಜಾಗದ ಸಮಸ್ಯೆ ಬಗೆಹರಿಸುವ ಜೊತೆಗೆ ಮಕ್ಕಳಿಗೆ ಉತ್ತಮ ಕಟ್ಟಡ ವ್ಯವಸ್ಥೆಯನ್ನು ಮಾಡಿ ಶಾಲಾಭಿವೃದ್ಧಿಗೆ ಶ್ರಮಿಸಬೇಕಿದೆ.