ತಂದೆ ಮಗಳ ಸಂಬಂಧ ಅನ್ನೋದೇ ಒಂಥರಾ ಚಂದ. ಕರಗದಷ್ಟು ಪ್ರೀತಿ ಅನ್ನೋ ಆಸ್ತಿ ಕೊಡುವ ತಂದೆ, ಪ್ರತಿಯೊಬ್ಬ ಹೆಣ್ಣು ಮಕ್ಕಳ ಮೊದಲ ಹೀರೋ.. ಅಪ್ಪನೆಂದರೆ ಹಬ್ಬುವ ಬಳ್ಳಿಗೆ ಆಸರೆ, ಗುರಿ ಮುಟ್ಟಿಸುವ ಹೊಣೆ. ಒಬ್ಬ ತಂದೆ, ಮಗಳ ಜನ್ಮಕ್ಕೆ ಕಾರಣೀಭೂತನಷ್ಟೇ ಅಲ್ಲಾ. ತಂದೆ ಮತ್ತು ಮಗಳ ಸಂಬಂಧವೆಂಬುದು ಜನುಮ-ಜನುಮಾಂತರದ ಸಂಬಂಧ.
ತಂದೆಯ ಪಾತ್ರ ಮಗಳ ಲಾಲನೆ ಪಾಲನೆ ಪೋಷಣೆ ವಿದ್ಯಾಭ್ಯಾಸ ಮಗಳ ಮದುವೆ ಹೀಗೆ ಎಲ್ಲದರಲ್ಲಿಯೂ ತಂದೆಯ ಪಾತ್ರ ಬಹುದೊಡ್ಡದು. ಹಾಗೆಯೇ ಮಗಳೂ ಕೂಡಾ ತಂದೆಗೆ ಮಗಳಾಗಿರದೆ ಅಪ್ಪನಿಗೆ ಒಳ್ಳೆಯ ಸ್ನೇಹಿತೆಯಾಗಿ, ಅವರ ಕನಸುಗಳಿಗೆ ದಾರಿ ದೀಪವಾಗಿ ಶೋಭೆ ತರುವಂತವಳಾಗಿದ್ದು, ತಂದೆಯ ಮುಪ್ಪಿನಾವಸ್ಥೆಯಲ್ಲಾಗಲೀ ಅನಾರೋಗ್ಯದಲ್ಲಾಗಲೀ ಅವರ ಲಾಲನೆ ಪಾಲನೆ ಮಾಡಿ ಒಳ್ಳೆಯ ತಾಯಿಯ ಸ್ಥಾನವನ್ನೂ ನೀಡಬಲ್ಲಳು. ಏನಪ್ಪ ತಂದೆ ಮಗಳ ಸಂಬಂಧದ ಬಗ್ಗೆ ಇಷ್ಟೆಲ್ಲ ಹೇಳ್ತಿದ್ದೀವಿ ಅಂದುಕೊಂಡ್ರ.
ಹೌದು. ತಂದೆಯ ಕನಸುಗಳಿಗೆ ರೆಕ್ಕೆ ಕಟ್ಟಿ ಮತ್ತೆ ಜೀವ ತುಂಬುತ್ತಿರುವ, ಖ್ಯಾತ ಪತ್ರಕರ್ತ ರವಿ ಬೆಳೆಗೆರೆ ಮತ್ತು ಶ್ರೀಮತಿ ಲಲಿತಾ ಬೆಳೆಗೆರೆಯವರ ಮುದ್ದಿನ ಕಿರಿಯ ಪುತ್ರಿ ಭಾವನ ಬೆಳೆಗೆರೆ ನಮ್ಮ ಈ ವಾರದ ಯಜಮಾನಿ.
ಅಪ್ಪ ಅಂದ್ರೆ ಆಕಾಶ ಎಂಬ ಮಾತು ಇವರ ವಿಷಯದಲ್ಲಿ ಅಕ್ಷರ ಸಹ ಸತ್ಯ. ಭಾವನ ಪ್ರತಿ ಮಾತಲ್ಲೂ ರವಿ ಬೆಳೆಗೆರೆ ಜೀವಿಸುತ್ತಿದ್ದಾರೆ. ಅಪ್ಪನ ಕನಸುಗಳಿಗೆ ಬೆನ್ನುಲುಬಾಗಿ ನಿಂತಿರುವ ಭಾವನಾ ನಿಜಕ್ಕೂ ಯುವಕರಿಗೆ ಸ್ಪೂರ್ತಿಯ ಚಿಲುಮೆ. ಸದ್ಯ ರವಿ ಬೆಳೆಗೆರೆಯವರ ಕನಸಿನ ಕೂಸು ಹಾಯ್ ಬೆಂಗಳೂರು ಪತ್ರಿಕೆಯನ್ನ ಮುನ್ನಡೆಸುತ್ತಿರುವ ಭಾವನ ತಮ್ಮ ತಂದೆಯ ಕನಸಿಗೆ ರಾಯಭಾರಿಯಾಗಿದ್ದಾರೆ. ಪತ್ರಿಕೋದ್ಯಮ ವಿಶ್ವವಿದ್ಯಾಲಯದ ಕನಸು ಕಂಡಿರುವ ಭಾವನ ನಟ ಶ್ರೀ ನಗರ ಕಿಟ್ಟಿಯ ಪತ್ನಿಯಾಗಿ ತಮ್ಮದೇ ಪ್ರೊಡಕ್ಷನ್ ಹೌಸ್ ಅನ್ನು ಕೂಡ ಹೊಂದಿದ್ದು, ಸಿನಿಮಾ ಹಾಗೂ ಧಾರವಾಹಿ ನಿರ್ಮಾಣದಲ್ಲಿ ತೊಡಗಿಸಿಕೊಂಡಿದ್ದಾರೆ.