ಬೆಂಗಳೂರು : ರಾಜ್ಯಸಭೆಯಲ್ಲಿ ನಮ್ಮನ್ನು ಸೋಲಿಸಿ ದೊಡ್ಡ ಸಾಧನೆ ಮಾಡಿದ್ದೇವೆ ಅಂತ ಕಾಂಗ್ರೆಸ್‌ನವರು ಅಂದುಕೊಂಡಿದ್ದಾರೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ ಕಾಂಗ್ರೆಸ್ ವಿರುದ್ಧ ಕಿಡಿಕಾಡಿದ್ದಾರೆ.
ನಗರದ ಜೆಪಿ ಭವನದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಅಡ್ಡ ಮತದಾನ ಮಾಡಿದ ಇಬ್ಬರಿಗೂ ನೋಟಿಸ್ ನೀಡಿದ್ದೇವೆ. ಕಾಂಗ್ರೆಸ್‌ಗೆ ವೋಟ್ ಕೊಟ್ಟು ಬಿಜೆಪಿಗೆ ಎರಡನೇ ಪ್ರಾಶಸ್ತ್ಯ ಕೊಟ್ಟಿದ್ದಾರೆ. ಎರಡು ಬ್ಯಾಲೆಟ್ ಪೇಪರ್‌ನಲ್ಲಿ ಅಲ್ಲಿ ಕೂತಿದ್ದ ಏಜೆಂಟರು ರಿಪೋರ್ಟ್ ಮಾಡಿದ್ದಾರೆ. ಎಂಥಾ ದುರ್ದೈವ, ಕೋಮುವಾದಿಗಳನ್ನು ಸೋಲಿಸಬೇಕು ಅಂತ ರಾಷ್ಟ್ರಮಟ್ಟದಲ್ಲಿ ಮಾತನಾಡುವ ಪಕ್ಷ ಇವತ್ತು ಬಿಜೆಪಿ ಗೆಲ್ಲಿಸಬೇಕು ಅಂತ ಮಾಡಿಕೊಂಡಿರುವ ಡೀಲ್ ರಾಜ್ಯದ ಜನತೆ ಮುಂದೆ ನಗ್ನ ಸತ್ಯವಾಗಿದೆ ಎಂದರು.
ಈ ವಿಚಾರವಾಗಿ ನಾಳೆ 11.30 ಕ್ಕೆ ಫ್ರೀಡಂ ಪಾರ್ಕ್‌ನಲ್ಲಿ ಮೌನ ಪ್ರತಿಭಟನೆ ಇಟ್ಟುಕೊಂಡಿದ್ದೇವೆ. ಈಗಾಗಲೇ ಪ್ರತಿಭಟನೆಗೆ ಪೋಲಿಸ್ ಕಮಿಷನರ್ ಅನುಮತಿ ಪಡೆದುಕೊಂಡಿದ್ದೇವೆ. ಗಾಂಧಿ ಬಗ್ಗೆ ಮಾತನಾಡುವ ಪಕ್ಷ ನಾಥೂರಾಮ್ ಗೋಡ್ಸೆ ಪಕ್ಷಕ್ಕೆ ವೋಟ್ ಹಾಕಿಸಿದೆ. ಇವ್ರು ಜಾತ್ಯತೀತ ತತ್ವ ಹೇಳುವಂತವರಾ? ಇನ್ನು ರಾಜ್ಯಾದ್ಯಂತ ನಾವು ಯಾತ್ರೆಗೆ ಹೊರಟಿದ್ದೇವೆ ಎಂದು ತಿಳಿಸಿದರು.
ಇಂದು ಬೆಂಗಳೂರು ನಗರದ ಎಲ್ಲಾ ವಿಧಾನಸಭಾ ಕ್ಷೇತ್ರಗಳ ಅಧ್ಯಕ್ಷರ ಸಭೆ ನಡೆಸಿದ್ದೇವೆ. ಕಾರ್ಪೋರೇಷನ್ ಚುನಾವಣೆಗೆ ನಾವು ಸಿದ್ದವಾಗಿದ್ದೇವೆ. ಎಲೆಕ್ಷನ್ ನೋಟಿಫಿಕೇಷನ್ ಹೊರಬರ್ತಿದ್ದಂತೆ ನಮ್ಮ ಪಕ್ಷದ ಅಭ್ಯರ್ಥಿ ಘೋಷಣೆ ಮಾಡ್ತೀವಿ. ಬಿಜೆಪಿಗೆ ಸಹಾಯ ಮಾಡುವ ಮೂಲಕ ನಮಗೆ ಶಕ್ತಿ ಕೊಟ್ಟಿದ್ದಾರೆ. ಮುಂದಿನ ವಿಧಾನಸಭಾ ಚುನಾವಣೆಗೆ ಒಂದೇ ನಾಣ್ಯದ ಎರಡು ಮುಖಗಳು ಅಂತ ಅವ್ರೇ ಸಾಬೀತು ಮಾಡಿದ್ದಾರೆ. ಜನ ನಮಗೆ ಮಾನ್ಯತೆ ಮಾಡಿದ್ದಾರೆ ಎಂದರು.