ಸಾಧನೆ ಸಾಧಕನ ಸ್ವತ್ತೇ ಹೊರತು ಮತ್ಯಾರ ಸ್ವತ್ತಲ್ಲ. ಬಡತನ,ಹಸಿವು, ಅವಮಾನ, ನಿಂದನೆಗಳೆಲ್ಲವನ್ನ ಮೀರಿದ್ದು ಸಾಧನೆ. ನೈತಿಕತೆ ಮತ್ತು ಜವಾಬ್ದಾರಿ ಎಂಬ ಪದಗಳು ಹೆಣ್ಣಿನ ಬೆನ್ನಿಗಂಟಿಕೊಂಡೇ ಬಂದಿದೆ. ಹೌದು. ಕ್ರೀಡೆ, ರಾಜಕೀಯ, ಕಲೆ, ಸಾಹಿತ್ಯ, ರಂಗಭೂಮಿ, ಸೇನೆ, ವೈದ್ಯಕೀಯ, ವಿಜ್ಞಾನ-ತಂತ್ರಜ್ಞಾನ, ಶಿಕ್ಷಣ…ಹೀಗೆ ಪ್ರತಿಯೊಂದು ಕ್ಷೇತ್ರದಲ್ಲೂ ಮಹಿಳೆ ತನ್ನದೇ ಆದ ಛಾಪು ಮೂಡಿಸಿದ್ದಾಳೆ. `ಆಧುನಿಕ ಮಹಿಳೆ ‘ ಎಂಬ ಹೆಗ್ಗಳಿಕೆಯೇನೋ ಇಂದಿನ ಮಹಿಳೆಗೆ ದೊರೆತಿದೆ. ಆದರೆ, ಅದರ ಹಿಂದೆ ಆಕೆ ಅದೆಷ್ಟು ನೋವನುಭವಿಸುತ್ತಾಳೆ ಎಂಬುದು ಬಹುತೇಕರಿಗೆ ಅರಿವಿಲ್ಲ.
ಮನುಷ್ಯನಿಗೆ ಒಂದಲ್ಲ ಒಂದು ಕಾರಣಕ್ಕೆ ಅನಾರೋಗ್ಯ ಉಂಟಾಗುವುದು ಸಹಜ. ಅದಕ್ಕೆ, ಸರಿಯಾದ ಚಿಕಿತ್ಸೆ ಹಾಗೂ ಆರೈಕೆಯ ಕ್ರಮ ಕೈಗೊಂಡಾಗ ಮಾತ್ರ ವಾಸಿಯಾಗುತ್ತದೆ. ಅಂತಹ ಒಂದು ಉತ್ತಮ ಆರೋಗ್ಯ ತಪಾಸಣೆ ಹಾಗೂ ಸಲಹೆಯನ್ನ ವೈದ್ಯರಿಂದ ಪಡೆದುಕೊಂಡಾಗಲೇ ನಮ್ಮ ಆರೋಗ್ಯ ಕೂಡ ಚೆನ್ನಾಗಿರಲು ಸಾಧ್ಯ. ಹೌದು. ವೃತ್ತಿಯಲ್ಲಿ ವೈದ್ಯೆಯಾಗಿ ಪ್ರವೃತ್ತಿಯಲ್ಲಿ ಸುಗಮ ಸಂಗೀತ ಗಾಯಕಿಯಾಗಿ ಕಳೆದ 42 ವರ್ಷಗಳಿಂದ ಸಂಗೀತ ಕ್ಷೇತ್ರದಲ್ಲಿ ತಮ್ಮದೇ ಆದ ಸ್ಥಾನವನ್ನು ಪಡೆದುಕೊಂಡಿರುವ ಡಾ.ರೋಹಿಣಿ ಮೋಹನ್ ಈ ವಾರದ ನಮ್ಮ ಯಜಮಾನಿ.
ಆಡು ಮುಟ್ಟದ ಸೊಪ್ಪಿಲ್ಲ ಎನ್ನುವ ಮಾತು ರೋಹಿಣಿಯವರಿಗೆ ಸೂಕ್ತವಾಗಿ ಒಪ್ಪುತ್ತದೆ ಯಾಕಂದ್ರೆ, ವೈದ್ಯೆಯಾಗಿದ್ರು ವೈದ್ಯ ವೃತ್ತಿಗಷ್ಟೇ ಸೀಮಿತವಾಗದೆ ಗಾಯಕಿಯಾಗಿ, ಲೇಖಕಿಯಾಗಿ, ರಾಗ ಸಂಯೋಜಕಿಯಾಗಿ, ವಾಗ್ಮಿಯಾಗಿ, ಉಪನ್ಯಾಸಗಳನ್ನ ನೀಡುತ್ತಾ, ಕಾರ್ಯಾಗಾರಗಳನ್ನ ನಡೆಸುತ್ತಾ ಬಂದಿದ್ದಾರೆ. ಹಿರಿಯ ಗಾಯಕಿ ಶ್ರೀಮತಿ ಎಚ್.ಆರ್. ಲೀಲಾವತಿಯವರ ಶಿಷ್ಯೆಯಾಗಿ ಸುಗಮ ಸಂಗೀತ ಪರಂಪರೆಯನ್ನು ಮುಂದುವರೆಸಿಕೊಂಡು ಬಂದಿರುವ ಇವರು ಮೂಲತಃ ಸಾಂಸ್ಕೃತಿಕ ನಗರಿ ಮೈಸೂರಿನವರು. ಸದಾ ಓದಿನ ವಿಷಯದಲ್ಲೂ ಮುಂದಿದ್ದ ರೋಹಿಣಿಗೆ ಚಿಕ್ಕಂದಿನಿಂದಲೂ ಸಂಗೀತಾಸಕ್ತಿ ಇದ್ದು ಬಾಲ್ಯದಿಂದಲೇ ಸಂಗೀತಾಭ್ಯಾಸದಲ್ಲಿ ತೊಡಗಿದ್ದರು. ರಾಜ್ಯದ ಬಹುತೇಕ ಸಂಘ ಸಂಸ್ಥೆಗಳು ಆಯೋಜಿಸಿದ್ದ ಕಾರ್ಯಕ್ರಮಗಳಲ್ಲಿ ಹಾಡಿರುವ ರೋಹಿಣಿ, ದೆಹಲಿ, ಮುಂಬೈ, ಕೊಯಮತ್ತೂರು ಸೇರಿದಂತೆ ವಿದೇಶಗಳಲ್ಲಿಯೂ ಕೂಡ ಹಾಡಿ ರಾಜ್ಯದ ಕೀರ್ತಿಯನ್ನು ಹೆಚ್ಚಿಸಿದ್ದಾರೆ.
ಬರವಣಿಗೆಯಲ್ಲೂ ಆಸಕ್ತಿ ಹೊಂದಿರುವ ರೋಹಿಣಿ ತಮ್ಮ ಗುರುಗಳಾದ ಎಚ್.ಆರ್.ಲೀಲಾವತಿಯವರ ಬಗೆಗಿನ ಪುಸ್ತಕವನ್ನು ಬರೆದಿದ್ದಾರೆ. 1988ರಲ್ಲಿ ಮ್ಯಾಂಚೆಸ್ಟರ್ ನಲ್ಲಿ ನಡೆದ ವಿಶ್ವ ಕನ್ನಡ ಸಮ್ಮೇಳನ, 2006ರಲ್ಲಿ ಬಾಲ್ಟಿಮೋರ್ ನಲ್ಲಿ ನಡೆದ ಅಕ್ಕ ಸಮ್ಮೇಳನ, ಟೋಕಿಯೋ, ಸಿಂಗಾಪುರ, ಟಾನ್ಝಾನಿಯ ಸೇರಿದಂತೆ ಹಲವು ದೇಶಗಳಲ್ಲಿ ಹಾಡಿರುವ ಕೀರ್ತಿ ಇವರಿಗೆ ಸಲ್ಲುತ್ತದೆ. ಆಕಾಶವಾಣಿ A ದರ್ಜೆಯ ಕಲಾವಿದೆಯಾಗಿರುವ ರೋಹಿಣಿ ಗಾಯನವನ್ನ ಮೆಚ್ಚಿದ್ದ ರಾಷ್ಟ್ರಕವಿ ಕುವೆಂಪುರವರು ‘ನನ್ನ ಹಾಡುಗಳನ್ನು ವಾದ್ಯಗಳಿಲ್ಲದೆ ನಿಮ್ಮ ಧ್ವನಿಯಲ್ಲಿ ಹಾಡಿ ಕೊಡಿ ಎಂದು ಸ್ಚತಃ ಕೇಳಿ ಪಡೆದುಕೊಂಡಿದ್ದರಂತೆ. ಅನೇಕ ಧ್ವನಿಸುರಳಿಗಳಲ್ಲಿ ಹಾಡಿರುವ ರೋಹಿಣಿ ತಮ್ಮದೇ ಆದ ಕನಸು, ಬೆಳ್ದಿಂಗಳು, ಜೀವನ ಕಲೆ, ಮಿಲನ, ಸಂಭ್ರಮ, ಭಾವ ಸೌರಭ, ಭಾವ ಭಕ್ತಿ, ಋತುಗಾನ, ಸಹನೆ ವಜ್ರದ ಕವಚ ಮಂಕುತಿಮ್ಮ ಸಾಂದ್ರಿಕೆ ಹೊರತಂದಿದ್ದಾರೆ. ಡಿ.ವಿ.ಜಿ.ಯವರ ಮಂಕುತಿಮ್ಮನ ಕಗ್ಗಕ್ಕೆ ಸಂಗೀತವನ್ನು ಅಳವಡಿಸಿ ರಾಜ್ಯದಾದ್ಯಂತ ‘ಕಗ್ಗದ ಯಾನ’ ಎಂಬ ವಿಶೇಷ ಕಲಿಕಾ ಕಾರ್ಯಾಗಾರವನ್ನು ನಡೆಸುತ್ತಿರುವುದು ಇವರ ಹಿರಿಮೆಗೆ ಸಂದ ಮತ್ತೊಂದು ಗರಿ.
ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯ ಸದಸ್ಯರೂ ಆಗಿದ್ದ ಇವರು ಪ್ರಸ್ತುತ ಸುಗಮ ಸಂಗೀತ ಒಕ್ಕೂಟದ ಉಪಾಧ್ಯಕ್ಷರು ಹಾಗೂ ಕರ್ನಾಟಕ ಸುಗಮ ಸಂಗೀತ ಪರಿಷತ್ತಿನ ಪದಾಧಿಕಾರಿಯಾಗಿದ್ದು, ಕರ್ನಾಟಕ ಕಲಾಶ್ರೀ, ಆರ್ಯಭಟ ಪ್ರಶಸ್ತಿ, ನಾಡಪ್ರಭು ಕೆಂಪೇಗೌಡ ಪ್ರಶಸ್ತಿ ಸೇರಿದಂತೆ ಅನೇಕ ಪ್ರಶಸ್ತಿ ಸನ್ಮಾನಗಳು ರೋಹಿಣಿಯವರನ್ನ ಅರಸಿ ಬಂದಿವೆ.
ಸಿಂಧೂರ ಗಂಗಾಧರ, ಪವರ್ ಟಿವಿ