ಬಾಗಲಕೋಟೆ : ಆರ್‌ಎಸ್‌ಎಸ್ ಚಡ್ಡಿ ಬಗ್ಗೆ ಸಿದ್ದರಾಮಯ್ಯ ವ್ಯಂಗ್ಯದ ವಿಚಾರದ ಬಗ್ಗೆ ಸಿದ್ದರಾಮಯ್ಯ ಮಾತಿಗೆ ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರು ಬೆಂಬಲಿಸಿದ್ದಾರೆ.
ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಮಾತಿನಲ್ಲಿ ಸತ್ಯವಿದೆ. ಬಿಜೆಪಿಯವರಿಗೆ ಇತಿಹಾಸವೇ ಗೊತ್ತಿಲ್ಲ. ಇತಿಹಾಸವನ್ನು ಓದದವರು, ತಿಳಿಯದವ್ರು ಇತಿಹಾಸ ರಚಿಸೋಕೆ ಸಾಧ್ಯವೇ? ಅಂಬೇಡ್ಕರ್, ಬಸವಣ್ಣನವರ ಪಠ್ಯ ತಿದ್ದುವ ಮೂಲಕ ಅವಮಾನ ತರುವ ಕೆಲಸ ಆಗ್ತಿದೆ. ಕವಿ ಕುವೆಂಪು ಅವರು ಈ ರಾಜ್ಯವನ್ನು ಶಾಂತಿಯ ತೋಟ ಅಂತೇಳಿ ರಚಿಸಿ ಹೋದ್ರು ಅಂತಹ ಶಾಂತಿಯ ತೋಟವನ್ನು ಛಿದ್ರ ಛಿದ್ರ ಮಾಡಿದ್ದಾರೆ ಎಂದರು.
ಅದಲ್ಲದೇ, ಧರ್ಮ ಧರ್ಮಗಳ ಮಧ್ಯೆ ಬೆಂಕಿ ಹಚ್ಚುತ್ತಿದ್ದಾರೆ. ಬಿಜೆಪಿಯವರ ಈ ಕೆಲಸ ಮಾಧ್ಯಮದವರಿಗೂ ಬೇಸರ ತರಿಸಿರಬಹುದು. ದೇಶದ ಅಭಿವೃದ್ಧಿ, ರೈತರು, ಯುವಕರು, ಉದ್ಯೋಗದ ಬಗ್ಗೆ ಚಿಂತೆ ಇಲ್ಲ. ಇವರೂ ಕೂಡಾ ಪಠ್ಯ ಪುಸ್ತಕಗಳನ್ನು ಓದಿಯೇ ಬಂದವರಲ್ವ? ಇದೇ ಸಂವಿಧಾನದ ಮೇಲೆ ಪ್ರಮಾಣ ಮಾಡಿ ಪಿಎಂ ಆದವರಲ್ವ? ಬೊಮ್ಮಾಯಿ ಕೂಡಾ ಅದೇ ಸಂವಿಧಾನದ ಮೇಲೆ ಪ್ರಮಾಣ ಮಾಡಿ ಸಿಎಂ ಆದವರಲ್ವ? ಇವತ್ತು ಅದನ್ನ ತಿರುಚುವಂತಹ ಕೆಲಸ ಮಾಡ್ತಿದಾರೆ ಇದು ಸರಿನಾ? ನಾಗ್ಪುರ್ ದಲ್ಲಿ ಆಗ್ತಿರೋ ತೀರ್ಮಾನಗಳೇ ಇಲ್ಲಿ ಆಗ್ತಿರೋದು ಎಂದು ಹೇಳಿದರು.
ಇನ್ನು, ಚಡ್ಡಿಗಳು ಏನ್ ತೀರ್ಮಾನ ಮಾಡ್ತಾರ ಅದನ್ನ ಇಲ್ಲಿ ಪೂರ್ಣ ಪ್ಯಾಂಟ್ ಹಾಕೊಂಡವ್ರು ಮಾಡ್ತಿದಾರೆ. ಹಾಗಾಗಿ ನಮ್ಮ ನಾಯಕರು ಹೇಳಿದ್ದು ಸತ್ಯವಿದೆ, ಅದಕ್ಕೆ ನಮ್ಮ ಸಂಪೂರ್ಣ ಬೆಂಬಲ ಇದೆ. ಮಕ್ಕಳ ತಲೆಯಲ್ಲಿ ಇತಿಹಾಸ ಹೋಗಬೇಕು. ಹೆಡಗೆವಾರ್ ಸ್ವಾತಂತ್ರ್ಯ ಹೋರಾಟಗಾರರಾ? ಸೂಲಿಬೆಲೆ ಸ್ವಾತಂತ್ರ್ಯ ಹೋರಾಟಗಾರನಾ? ಪಂಡಿತನಾ? ಅಣ್ಣ ಬಸವಣ್ಣನಾ? ಅಂಬೇಡ್ಕರಾ? ಸಂವಿಧಾನ, ಇತಿಹಾಸ ಬರೆದವರಾ ಹೆಡಗೆವಾರ್? ಹೆಡಗೆವಾರ್ ಅವರನ್ನು ಪಠ್ಯ ಪುಸ್ತಕದಲ್ಲಿ ಓದಬೇಕು ಅಂತಾ, ಮಕ್ಕಳ ತಲೆಯಲ್ಲಿ ತುಂಬೋಕೆ ಹೊರಟಿರೋದು ನೀಚ ಬುದ್ದಿ. ನಾಚಿಕೆ, ಮಾನ ಮರ್ಯಾದೆಯನ್ನು ಕಳೆದುಕೊಳ್ಳುವಂತವ್ರು. ಬಿಜೆಪಿಯವರು ಬಸವರಾಜ್ ಬೊಮ್ಮಾಯಿ ಬಸವಣ್ಣನವರ ಹೆಸರು ಇಟ್ಟುಕೊಂಡಿದಾರೆ. ಬಸವಣ್ಣನಿಗೆ ಚ್ಯುತಿ ತರುವ ಪಠ್ಯಪುಸ್ತಕಕ್ಕೆ ಸಿಎಂ ಅನುಮತಿ ಕೊಡ್ತಾರೆ ಎಂದರು.