ವಿಜಯಪುರ : ಈ ಗಾರ್ಡನ್ ವಿಜಯಪುರದಲ್ಲಿ ನಾಶಿ ಗಾರ್ಡನ್ ಎಂದೇ ಫೇಮಸ್. ಹಚ್ಚ ಹಸಿರಿನಿಂದ ಕಂಗೊಳಿಸ್ತಿರೋ ಈ ಗಾರ್ಡನ್ನ ಯಾವುದೇ ಇಲಾಖೆ ನಿರ್ಮಿಸಿಲ್ಲ. ಈ ವೃದ್ಧ ದಂಪತಿಗಳು ನಿರ್ಮಿಸಿರೋ ಗಾರ್ಡನ್.
ಬಿಸಿಲನಾಡು ವಿಜಯಪುರ ನಗರದ ವಜ್ರ ಹನುಮಾನ್ ಗೇಟ್ ಬಳಿಯಿರೋ 1 ಎಕರೆ ಸರ್ಕಾರಿ ಜಾಗದಲ್ಲಿ 2000ಕ್ಕೂ ಅಧಿಕ ವಿವಿಧ ಜಾತಿ ಗಿಡಮರಗಳನ್ನು ಬೆಳೆಸಿದ್ದಾರೆ. ಇವರಿಗೆ ಮಕ್ಕಳು ಹುಟ್ಟಲಿಲ್ಲ. ಮಕ್ಕಳು ಹುಟ್ಟಿಲಿಲ್ಲ ಅಂತ ಚಿಂತಿಸದೇ ಮರಗಳನ್ನೇ ಮಕ್ಕಳಂತೆ ಕಾಣುತ್ತಿದ್ದಾರೆ. ಬರೋಬ್ಬರಿ 20 ವರ್ಷಗಳಿಂದ ನಿತ್ಯ ವೃದ್ಧ ದಂಪತಿ ಈರಣ್ಣ ಹಾಗೂ ನಾಗಮ್ಮ ನಾಶಿ ಗಾರ್ಡನ್ ನಲ್ಲಿ ಮರಗಳಿಗೆ ನೀರು ಹಾಕ್ತಾರೆ. ತಮಗಿದ್ದ ಸೈಟ್ನಲ್ಲಿ ಅರ್ಧಭಾಗ ಮಾರಾಟ ಮಾಡಿ ಗಾರ್ಡನ್ ಹಾಗೂ ದೇಗುಲ ನಿರ್ಮಿಸಿದ್ದಾರೆ. ಗಿಡಮರಗಳಲ್ಲೇ ವೃದ್ಧ ದಂಪತಿ ಮಕ್ಕಳನ್ನ, ದೇವರನ್ನ ಕಾಣ್ತಿದ್ದಾರೆ.
ಇನ್ನು ದೇಗುಲ ವಿಸ್ತರಣೆಗೆ ಶಾಸಕರ ಅನುದಾನವೂ ದೊರೆತಿದೆ. ಇನ್ನು ದೇಗುಲ ಸುತ್ತಲೂ ಗಿಡಮರಗಳು ತುಂಬಿವೆ. ಎಲ್ಲೆಲ್ಲೂ ಹಸಿರೋ ಹಸಿರು. ಇವರಿಗೆ ಪುಟ್ಟದೊಂದು ಮನೆಯಿದೆ. ಪತ್ನಿ ನಾಗಮ್ಮ ರೊಟ್ಟಿ ಮಾರಾಟ ಮಾಡ್ತಾರೆ, ಇದರಿಂದ ಬಂದ ಹಣದಿಂದ ಉಪಜೀವನ ನಡೆಸ್ತಾರೆ. ಈರಣ್ಣ ನಾಶಿ ಮಾತ್ರ ಬೆಳಿಗ್ಗೆಯಿಂದ ರಾತ್ರಿಯವರೆಗೆ ಗಾರ್ಡನ್ ನಲ್ಲೆ ಕಾಯಕ. ಇವರ ಪರಿಸರ ಕಾಯಕ್ಕೆ ಪತ್ನಿಯೂ ಸಾಥ್ ಕೊಟ್ಟಿದ್ದಾರೆ. ಜನರು ದೇಗುಲಕ್ಕೆ, ಗಾರ್ಡನ್ ನಲ್ಲಿ ವಿಹರಿಸಲಿಕ್ಕೆ ಬರ್ತಾರೆ. ಇವರ ಪರಿಸರ ಕಾರ್ಯವನ್ನು ಗುರುತಿಸಿ ಹಲವು ಸಂಘ ಸಂಸ್ಥೆಗಳು ಸನ್ಮಾನಿಸಿವೆ.
ಒಟ್ಟಿನಲ್ಲಿ ತಮಗೆ ಮಕ್ಕಳು ಹುಟ್ಟಲಿಲ್ಲಂತ ಕೊರಗದೇ ವೃದ್ಧ ದಂಪತಿಗಳು ತಮ್ಮ ಸ್ವಂತ ಹಣದಲ್ಲೇ ಗಾರ್ಡನ್ ನಿರ್ಮಿಸಿ ನೆಮ್ಮದಿಯನ್ನು ಕಾಣುತ್ತಿದ್ದಾರೆ. ಸರ್ಕಾರ, ಜನಪ್ರತಿನಿಧಿಗಳು ವಿಕಲಚೇತನ ಪರಿಸರ ಪ್ರೇಮಿ ಈರಣ್ಣನ ಕುಟುಂಬಕ್ಕೆ ಮಾಸಾಶನ ಸೇರಿದಂತೆ ಇತರೆ ಸೌಲಭ್ಯ ಕಲ್ಪಿಸಬೇಕಿದೆ.