ಬೆಂಗಳೂರು: ‘ರಾಜ್ಯಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಎರಡನೇ ಅಭ್ಯರ್ಥಿಗೆ ಜೆಡಿಎಸ್ ಬೆಂಬಲ ನೀಡಬೇಕು’ ಎಂದು ಕಾಂಗ್ರೆಸ್ ಮುಖಂಡ ಹೆಚ್.ಸಿ. ಮಹದೇವಪ್ಪ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯಸಭೆಯಲ್ಲಿ ಗೆಲ್ಲಲು ಬೇಕಾದಷ್ಟು ಬೆಂಬಲ ಇಲ್ಲದಿದ್ದರೂ ತಮ್ಮ ಅಭ್ಯರ್ಥಿಯನ್ನು ಚುನಾವಣೆಗೆ ನಿಲ್ಲಿಸಿದ್ದು ಯಾವ ಕಾರಣಕ್ಕೆ ಎಂಬುದನ್ನು ದೇವೇಗೌಡ ಅವರು ಸ್ಪಷ್ಟಪಡಿಸಬೇಕು’ ಎಂದಿದ್ದಾರೆ.
‘ಕಳೆದ ಲೋಕಸಭಾ ಚುನಾವಣೆಯಲ್ಲಿ ಮೈತ್ರಿಯ ನಂತರದಲ್ಲಿ ತುಮಕೂರು ಕ್ಷೇತ್ರವನ್ನು ಪಡೆದಿದ್ದ ದೇವೇಗೌಡರು, ಅಲ್ಲಿ ಸೋತರು ಎಂಬ ಕಾರಣಕ್ಕೆ ಹಿರಿಯ ನಾಯಕರು ಎಂಬ ಗೌರವ ಇಟ್ಟುಕೊಂಡು ಕಾಂಗ್ರೆಸ್ ಹೈಕಮಾಂಡ್ ಅವರಿಗೆ ರಾಜ್ಯಸಭೆಯಲ್ಲಿ ಅವಕಾಶವನ್ನು ಕಲ್ಪಿಸಿದೆ. ಹೀಗಿರುವಾಗ ತಾನು ಕಾಂಗ್ರೆಸ್ ಪರವಾಗಿ ನಿಲ್ಲಬೇಕಾದ್ದು ನ್ಯಾಯಯುತವಾದ ನಡೆ ಎಂದು ದೇವೇಗೌಡರಿಗೆ ಅನಿಸಬೇಕಿತ್ತು’ ಎಂದಿದ್ದಾರೆ.
‘ವಿರೋಧ ಪಕ್ಷದ ಸ್ಥಾನದಲ್ಲಿ ಇದ್ದುಕೊಂಡು ವಿರೋಧ ಪಕ್ಷವನ್ನೇ ನಿಂದಿಸುವ ಅಪರೂಪದ ಜನ ಪ್ರತಿನಿಧಿಯಾದ ಕುಮಾರಸ್ವಾಮಿ, ಮಾತಿನಲ್ಲಷ್ಟೆ ಮುಸ್ಲಿಂ ಪ್ರೀತಿ ತೋರಿಸದೆ ರಾಜ್ಯಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯನ್ನು ಬೆಂಬಲಿಸಬೇಕು. ಮುಸ್ಲಿಂ ಅಭ್ಯರ್ಥಿ ರಾಜ್ಯಸಭೆ ಪ್ರವೇಶಿಸಿದರೆ, ಈ ಹೊತ್ತಿನ ಕೆಟ್ಟ ಮುಸ್ಲಿಂ ದ್ವೇಷದ ಸಂದರ್ಭದಲ್ಲಿ ಆ ಬಗ್ಗೆ ಧ್ವನಿ ಎತ್ತುವ ಅವರ ಶಕ್ತಿ ಹೆಚ್ಚಾಗುವುದಿಲ್ಲವೇ? ಎಲ್ಲವೂ ಇಷ್ಟೊಂದು ನೇರವಾಗಿ ಮತ್ತು ಸ್ಪಷ್ಟವಾಗಿ ಇದ್ದಾಗಲೂ ಕೂಡಾ ಜೆಡಿಎಸ್ ಅಸೂಕ್ಷ್ಮತೆಯಿಂದ ವರ್ತಿಸಿದರೆ ಹೇಗೆ?’ ಎಂದೂ ಅವರೂ ಕೇಳಿದ್ದಾರೆ.