ರಾಜ್ಯ ರಾಜಕೀಯದಲ್ಲಿ ಇನ್ನೇನೇನು ಬೆಳವಣಿಗೆಗಳು ನಡೆಯುತ್ವೋ ಗೊತ್ತಿಲ್ಲ.. ಎಂಥೆಂಥಾ ಮಾತುಗಳನ್ನ ಕೇಳಬೇಕೋ ಗೊತ್ತಿಲ್ಲ. ರಾಷ್ಟ್ರಮಟ್ಟದಲ್ಲಿ ನಡೆಯದ ಎಲ್ಲಾ ಬೆಳವಣಿಗೆಗಳು ರಾಜ್ಯದಲ್ಲಿ ನಡೆಯುತ್ತಿವೆ.. ಒಂದು ರೀತಿ ರಾಜ್ಯ ಪ್ರಯೋಗ ಶಾಲೆಯಾಗ್ತಿದೆ.. ಹಿಜಾಬ್, ಕೇಸರಿ ಶಾಲು ಆಯ್ತು.. ಹಲಾಲ್, ಜಟ್ಕಾ ಕಟ್ ಆಯ್ತು..ಮಸೀದಿ ಮಂದಿರ ಆಯ್ತು..ಆರ್‌ಎಸ್‌ಎಸ್ ಮೂಲವನ್ನೂ ಕೆದಕಲಾಯ್ತು..ಇದೀಗ ಹೊಸದಾಗಿ ಚಡ್ಡಿ ವಾರ್ ಶುರುವಾಗಿದೆ.
ಕಳೆದ ಒಂದು ವರ್ಷದಿಂದ ರಾಜ್ಯ ಪ್ರಯೋಗ ಶಾಲೆಯಾಗ್ತಿದೆ… ರಾಷ್ಟ್ರೀಯ ಮಟ್ಟದಲ್ಲಿ ಯಾವುದನ್ನು ತರ್ಬೇಕು ಅಂತ ಡಿಸೈಡ್ ಮಾಡಲಾಗುತ್ತೋ ಅದನ್ನ ಮೊದಲು ರಾಜ್ಯದಲ್ಲಿ ಪ್ರಯೋಗಕ್ಕೆ ಒಳಪಡಿಸಲಾಗ್ತಿದೆ.. ಯಾಕಂದ್ರೆ, ಹೇಳಿ ಕೇಳಿ ಕರ್ನಾಟಕ ಶಾಂತಿ, ಸಹಬಾಳ್ವೆಗೆ ಹೆಸರಾದ ರಾಜ್ಯ. ಇಲ್ಲಿನವರು ಎಲ್ಲವನ್ನೂ ತಾಳ್ಮೆಯಿಂದ ಸಹಿಸಿಕೊಳ್ತಾರೆ ಅನ್ನೋದು ನಮ್ಮ ದೆಹಲಿ ರಾಜಕಾರಣಿಗಳಿಗೂ ಗೊತ್ತಿದೆ.. ಹಾಗಾಗಿ ತಮ್ಮ ಬೇಳೆ ಬೇಯಿಸಿಕೊಳ್ಳೋಕೆ ಏನೇ ಹೊಸದನ್ನೂ ತರಬೇಕಾದ್ರೂ ಮೊದಲು ರಾಜ್ಯದಲ್ಲೇ ಪ್ರಯೋಗವನ್ನ ಮಾಡಲಾಗ್ತಿದೆ..
ಇದು ಒಂದು ಚಡ್ಡಿಯ ಕಥೆ.. ಪ್ರಸ್ತುತ ಸಾಲು ಸಾಲು ಚುನಾವಣೆಗಳು ಎದುರಾಗ್ತಿವೆ.. ರಾಜ್ಯದಲ್ಲಿ ಬಿಬಿಎಂಪಿ, ಜಿ.ಪಂ.ತಾ.ಪಂ ಚುನಾವಣೆಗಳು ಬರ್ತಿವೆ. ವಿಧಾನಸಭೆ ಚುನಾವಣೆಗೆ 11 ತಿಂಗಳು ಮಾತ್ರ ಬಾಕಿಯಿದೆ.. ಇದೇ ವೇಳೆ ರಾಜ್ಯ ಸರ್ಕಾರದ ಮೇಲೆ ಹಲವು ಗುರುತರ ಆರೋಪಗಳು ಎದುರಾಗಿವೆ. ಇವುಗಳಿಂದ ಮರೆಯಾಗೋಕೆ ಬಿಜೆಪಿ ಆರ್‌ಎಸ್‌ಎಸ್ ನಾಯಕರು ಒಂದಲ್ಲ ಒಂದು ವಿವಾದಗಳನ್ನ ಮುಂದೆ ತರ್ತಿದ್ದಾರೆ.. ಅಭಿವೃದ್ಧಿ ಶೂನ್ಯವಾಗಿರೋದ್ರಿಂದ ಹಿಂದುತ್ವದ ಅಜೆಂಡಾದ ಮೂಲಕವೇ ಅಧಿಕಾರ ಹಿಡಿಯೋ ಪ್ರಯತ್ನ ನಡೆಸಿದ್ದಾರೆ.. ಹೀಗಾಗಿ ಒಂದೊಂದೇ ವಿವಾದಗಳು ಶುರುವಾಗ್ತಿವೆ. ಇದೀಗ ಹೊಸದಾಗಿ ಮಸೀದಿಗಳಲ್ಲಿ ಮಂದಿರ ಹುಡುಕುವ ವಿವಾದ ಶುರುವಾಗಿದೆ. ಇದು ಕಾಂಗ್ರೆಸ್ ನಾಯಕರಿಗೆ ನುಂಗಲಾರದ ತುತ್ತಾಗಿದೆ. ಹಾಗಾಗಿ ಕೈ ನಾಯಕರು ಬಿಜೆಪಿ ವಿರುದ್ಧ ಪಿಎಸ್‌ಐ ಹಗರಣ ಕೆದಕಿದ್ರು. ಇದಾದ ಬಳಿಕ ಆರ್‌ಎಸ್‌ಎಸ್ ಮೂಲವನ್ನೂ ಕೆದಕಿದ್ರು. ಹೊಸದಾಗಿ ಆರ್‌ಎಸ್‌ಎಸ್ ಸಮವಸ್ತ್ರ ಚಡ್ಡಿಯನ್ನೂ ಎಳೆತಂದಿದ್ದಾರೆ. ಚಡ್ಡಿಗೆ ಬೆಂಕಿ ಹಚ್ಚುವ ಮೂಲಕ ಅಭಿಯಾನವನ್ನೇ ಪ್ರಾರಂಭ ಮಾಡ್ತಿದ್ದಾರೆ.
ಪಠ್ಯಪುಸ್ತಕದಲ್ಲಿ ಹೆಡಗೇವಾರ್, ಸೂಲಿಬೆಲೆಯವರ ಪಾಠಗಳನ್ನ ಸೇರಿಸಿ ಸಂಘ ಪರಿವಾರದ ಸಿದ್ದಾಂತವನ್ನ ಮಕ್ಕಳಿಗೆ ಭೋದಿಸೋಕೆ ಬಿಜೆಪಿ ಕೈಹಾಕ್ತು. ಪರ ವಿರೋಧ ಚರ್ಚೆಗಳು ಶುರುವಾದ್ವು.. ಬುದ್ಧ, ಬಸವ, ಅಂಬೇಡ್ಕರ್, ಕುವೆಂಪು ಅವಹೇಳನದ ಬಗ್ಗೆ ಸ್ವಾಮೀಜಿಗಳೇ ಪತ್ರ ಬರೆದ್ರು. ಆದ್ರೂ ಸರ್ಕಾರ ಪಠ್ಯ ಪುಸ್ತಕ ಪರಿಷ್ಕರಣೆ ಕೈಬಿಡಲಿಲ್ಲ. ಹೀಗಾಗಿ ಎನ್‌ಎಸ್‌ಯುಐ ಕಾರ್ಯಕರ್ತರು ಮೊನ್ನೆ ಸಚಿವ ನಾಗೇಶ್ ನಿವಾಸದ ಮುಂದೆ ಆರ್‌ಎಸ್‌ಎಸ್ ಚಡ್ಡಿಯನ್ನ ಸುಟ್ಟು ಆಕ್ರೋಶ ಹೊರಹಾಕಿದ್ರು..ಇದಾದ ಬಳಿಕ ಅವರ ಮೇಲೆ ಕೇಸ್ ಹಾಕಲಾಯ್ತು..ಜೈಲಿಗೂ ಕಳಿಸಲಾಯ್ತು.. ಇದನ್ನೇ ಮುಂದಿಟ್ಟುಕೊಂಡ ಕಾಂಗ್ರೆಸ್ ಚಡ್ಡಿ ಸುಡುವುದನ್ನೇ ಚಳವಳಿಯನ್ನಾಗಿ ಮಾಡುವ ಮೂಲಕ ಬಿಜೆಪಿಗೇ ಸೆಡ್ಡು ಹೊಡೆದಿದೆ. ಮತ್ತೆ ಯೂತ್ ಕಾಂಗ್ರೆಸ್ ನಾಯಕರು ಪ್ರತಿಭಟನೆ ಮಾಡುವ ಮೂಲಕ ಆಕ್ರೋಶ ಹೊರಹಾಕಿದ್ದಾರೆ..
ಸಿದ್ದರಾಮಯ್ಯ ಯಾರ ಚಡ್ಡಿ ಸುಡ್ತಾರಂತೆ..ಕಾಂಗ್ರೆಸ್‌ನವರ ಬಳಿ ಚಡ್ಡಿ ಹೆಚ್ಚಾಗಿರಬಹುದು ಅದ್ಕೆ ಸುಡ್ತಿರಬಹುದು. ಡಿಕೆಶಿ ಅವರ ತಿಕ್ಕಾಟದಿಂದ ಸಿದ್ದರಾಮಯ್ಯ ತಲೆ ಖಾಲಿ ಆಗಿದೆ ಅಂತ ಬಿಜೆಪಿ ನಾಯಕರು ಕಿಡಿ ಕಾರಿದ್ದಾರೆ.
ಒಟ್ನಲ್ಲಿ ಒಂದಲ್ಲ ಒಂದು ವಿವಾದಗಳನ್ನ ಹುಟ್ಟುಹಾಕುವ ಮೂಲಕ ಸರ್ಕಾರ ಚುನಾವಣೆಯಲ್ಲಿ ಹಿಂದುತ್ವದ ಆಧಾರದ ಮೇಲೆ ಮತಗಳಿಸೋಕೆ ನೋಡ್ತಿದೆ..ಆದ್ರೆ, ಯಾವುದೇ ಹೊಸ ವಿವಾದ ಬಂದ್ರೂ ಅದಕ್ಕೆ ಪ್ರತಿಯಾಗಿ ಕಾಂಗ್ರೆಸ್ ಮತ್ತೊಂದು ಅಸ್ತ್ರವನ್ನ ಪ್ರಯೋಗಿಸ್ತಿದೆ..ಆರ್‌ಎಸ್‌ಎಸ್ ಮೂಲದ ನಂತ್ರ ಚಡ್ಡಿ ಸುಡುವ ಅಭಿಯಾನವನ್ನ ಆರಂಭಿಸಿದೆ.. ಈ ಮೂಲಕ ಆರ್‌ಎಸ್‌ಎಸ್ ನಾಯಕರ ಹೊಟ್ಟೆ ಉರಿಸಿದೆ..