ಬೆಂಗಳೂರು : ರಾಜ್ಯದಲ್ಲಿ ಭುಗಿಲೆದ್ದಿರುವ ಪಠ್ಯಪುಸ್ತಕ ಪರಿಷ್ಕರಣಾ ವಿವಾದ ದಿನಕ್ಕೆೊಂದು ತಿರುವು ಪಡೆದುಕೊಳ್ಳುತ್ತಿದೆ. ಹೋರಾಟ ತೀವ್ರವಾದ್ರೂ ಸಿಎಂ ಇನ್ನೂ ಮೌನ ಮುರಿದಿಲ್ಲ.ಅತ್ತ ಹೈಕಮಾಂಡ್ ಎದುರು ಹಾಕಿಕೊಳ್ಳಲು ಆಗದೇ, ಇತ್ತ ವಿಪಕ್ಷಗಳ ಟೀಕಾಪ್ರಹಾರ ಎದುರಿಸಲಾಗದೆ ಸಿಎಂ ಬೊಮ್ಮಾಯಿ ಸರ್ಕಾರ ಸಂಕಷ್ಟಕ್ಕೀಡಾಗಿದೆ.ಹೀಗಾಗಿ ಮುಖ್ಯಮಂತ್ರಿ ನಡೆ ಮುಂದೇನು ಎಂಬ ಪ್ರಶ್ನೆ ಕಾಡಲಾರಂಭಿಸಿದೆ.
ರಾಜ್ಯದಲ್ಲಿ ಪಠ್ಯ ಪುಸ್ತಕ ಪರಾಕ್ರಮ ದಿನೇ ದಿನೇ ಕಾವೇರುತ್ತಿದೆಯ. ನಾಡಗೀತೆಗೆ ಅಪಮಾನ ಮಾಡಿದ ಆರೋಪ ಹೊತ್ತಿರುವ ರೋಹಿತ್ ಚಕ್ರತೀರ್ಥ ವಿರುದ್ಧ ಪ್ರತಿಭಟನೆಗಳು ಕಾವೇರುತ್ತಿವೆ. ಚಕ್ರತೀರ್ಥ ಅವರನ್ನ ಬಂಧಿಸಿಸಬೇಕು. ಹಾಗೇ ಬಸವಣ್ಣ, ಕುವೆಂಪು, ನಾರಾಯಣಗುರು, ಭಗತ್ ಸಿಂಗ್ ಗೆ ಅಪಮಾನ ಮಾಡಿದ ಪಠ್ಯವನ್ನು ತಿರಸ್ಕರಿಸಿ ಹಿಂದಿನ ಪಠ್ಯವನ್ನೇ ಮುಂದುವರಿಸಬೇಕು ಅಂತ ಪ್ರತಿಭಟನೆ ಮಾಡಲಾಗುತ್ತಿದೆ. ಆದ್ರೆ, ಕುವೆಂಪುಗೆ ಅವಮಾನವಾದ ಬಗ್ಗೆ ಆದಿಚುಂಚನಗಿರಿ ಮಠದ ನಿರ್ಮಲಾನಂದ ಶ್ರೀಗಳು ಆಕ್ಷೇಪವೆತ್ತಿದ್ದು,ಕುವೆಂಪು ವಿರಚಿತ ನಾಡಗೀತೆ ತಿರುಚಿದ್ದಾರೆ ಎಂದಿದ್ದಾರೆ.ಇತ್ತ ಸಾಣೇಹಳ್ಳಿಯ ಪಂಡಿತಾರಾಧ್ಯ ಶ್ರೀಗಳಿಂದಲೂ ಆಕ್ರೋಶ ವ್ಯಕ್ತವಾಗಿದೆ.ಬಸವಣ್ಣ ಕುರಿತ ಸಾಲುಗಳನ್ನ ತಿರುಚಿದ್ದಾರೆಂದು ಶ್ರೀಗಳು ಪತ್ರ ಬರೆದಿದ್ದಾರೆ.ಅಲ್ಲದೆ, ಸಿಎಂ ಬೊಮ್ಮಾಯಿಗೆ ಪತ್ರ ಬರೆದು ಹಳೆ ಪಠ್ಯ ಮುಂದುವರಿಸಲು ಆಗ್ರಹಿಸಿ ಪಂಚಮಸಾಲಿ ಪೀಠದ ಬಸವ ಜಯಮೃತ್ಯುಂಜಯಶ್ರೀಗಳು ಆಗ್ರಹಿಸಿದ್ದಾರೆ. ಆದ್ರೆ ಯಾವುದಕ್ಕೂ ಸ್ಪಷ್ಟೀಕರಣ ನೀಡದೆ ಸರ್ಕಾರ ಜಾಣಮೌನ ವಹಿಸಿದೆ.
ಪಠ್ಯ ಪುಸ್ತಕ ಪರಿಷ್ಕರಣೆ ಬಗ್ಗೆ ಸಿಎಂ ದಿವ್ಯ ಮೌನದ ಹೊರತಾಗಿಯೂ ಕೋಟ ಶ್ರೀನಿವಾಸ ಪೂಜಾರಿ ಪಠ್ಯ ವಾಪಸ್ ಬಗ್ಗೆ ವ್ಯಂಗ್ಯವಾಡಿದ್ದಾರೆ. ಕಾಲಕಾಲಕ್ಕೆ ಸರ್ಕಾರ ಕೆಲವೊಂದು ಬದಲಾವಣೆ ಮಾಡುತ್ತದೆ. ನಾರಾಯಣ ಗುರು ,ಭಗತ್ ಸಿಂಗ್ ಪಾಠಗಳು ಇಲ್ಲ ಅಂದ್ರು. ಅದೆಲ್ಲಾ ಸುಳ್ಳು. ಅವೆಲ್ಲವೂ ಪಠ್ಯದಲ್ಲಿ ಇದೆ. ಕೆಲವರು ಪಾಠ ಹಿಂಪಡೆದುಕೊಳ್ಳಬೇಕು ಎಂದು ಹೇಳಿದ್ದಾರೆ. ಅಸಲಿಗೆ ಕೆಲವರ ಪಾಠಗಳು ಪಠ್ಯದಲ್ಲೇ ಇಲ್ಲ. ಹಿಂದೆ ಅಸಹಿಷ್ಣುತೆ ವಿಚಾರದಲ್ಲಿ ಕೆಲವರು ಪ್ರಶಸ್ತಿ ವಾಪಸ್ ಮಾಡಿದರು. ಆದ್ರೆ, ಸರ್ಟಿಫಿಕೇಟ್ ಮಾತ್ರ ವಾಪಸ್ ಮಾಡಿದ್ರು. ಅದ್ರ ಮೊತ್ತ ವಾಪಸ್ ಬಂದಿಲ್ಲ ಅಂತ ಪಾಠ ಹಿಂಪಡೆದುಕೊಳ್ಳಬೇಕು ಎಂದವರಿಗೆ ಸಚಿವ ಕೋಟಾ ಟಾಂಗ್ ಕೊಟ್ಟರು.
ಒಟ್ಟಿನಲ್ಲಿ ಸಿಎಂಗೆ ಈ ವಿವಾದ ನುಂಗಲಾರದ ತುಪ್ಪವಾಗಿ ಪರಿಣಮಿಸಿದೆ. ಅತ್ತ ಪರಿಷ್ಕರಣೆ ಕೈಬಿಟ್ಟರೆ ಹೈಕಮಾಂಡ್ ಕೆಂಗಣ್ಣಿಗೆ ಗುರಿಯಾಗುತ್ತಾರೆ. ಇತ್ತ ಪಠ್ಯ ಕೈಬಿಡದೆ ಇದ್ರೆ ಹೋರಾಟದ ಕಾವು ಹೆಚ್ಚಾಗುತ್ತದೆ. ಹೀಗಾಗಿ ಶುಕ್ರವಾರ ಸರ್ಕಾರ ಅಂತಿಮ ನಿರ್ಧಾರ ಪ್ರಕಟಿಸಲಿದೆ.