ಶಿವಮೊಗ್ಗ : ನನ್ನನ್ನ ಪುಕ್ಸಟೆ ಬಂಧಿಸೋಕೆ ನಾನೇನು ಕುರಿ, ಕೋಳಿ, ಎಮ್ಮೆನಾ..? ಹಾಗೆಲ್ಲಾ ಬಂಧಿಸೋಕೆ ಬರಲ್ಲ ಎಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಅವರು ಹೇಳಿದರು.
ಈಶ್ವರಪ್ಪ ವಿರುದ್ಧ ದೆಹಲಿಯಲ್ಲಿ ಆಮ್ ಆದ್ಮಿ ಪಕ್ಷದ ರಾಜ್ಯಸಭಾ ಸದಸ್ಯ ಸಂಜಯ್ ಸಿಂಗ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಒಂದಲ್ಲ ಒಂದು ದಿನ ಕೇಸರಿ ಧ್ವಜವೇ ಭಾರತದ ರಾಷ್ಟ್ರಧ್ವಜವಾಗುತ್ತದೆ ಎಂದು ಈಶ್ವರಪ್ಪ ಹೇಳಿಕೆ ನೀಡಿದ್ದರು. ಇಂಥ ಹೇಳಿಕೆ ನೀಡಿದ್ದ ಈಶ್ವರಪ್ಪ ಅವರನ್ನು ಬಂಧಿಸಬೇಕು ಎಂದು ಸಂಜಯ್ ಸಿಂಗ್ ಆಗ್ರಹಿಸಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿದ ಅವರು, ಯಾರೋ ಅವರ ಪ್ರಚಾರಕ್ಕಾಗಿ ನನ್ನ ಮೇಲೆ ಕೇಸು ದಾಖಲಿಸಿದ್ದಾರಷ್ಟೇ ಅದರಿಂದ ಏನೂ ಪ್ರಯೋಜನವಿಲ್ಲ. ನೂರೋ, ಇನ್ನೂರೋ, ಐನೂರೋ ವರ್ಷ ಬಿಟ್ಟು ಕೆಂಪು ಕೋಟೆ ಮೇಲೆ ಹಾರಿಸಬಹುದು ಎಂದು ನಾನು ಹೇಳಿದ್ದು ನಿಜ. ನನ್ನ ಹೇಳಿಕೆಗೆ ನಾನು ಈಗಲೂ ಬದ್ಧನಾಗಿದ್ದೆನೆ ಎಂದರು.
ಇನ್ನು ರಾಷ್ಟ್ರಧ್ವಜಕ್ಕೆ ಅಪಮಾನ ಮಾಡಿದವರು ರಾಷ್ಟ್ರ ದ್ರೋಹಿಗಳು ಎಂದು ಈ ಹಿಂದೆಯೇ ಹೇಳಿದ್ದೇನೆ. ಸದನದಲ್ಲಿಯೂ ಇದನ್ನೇ ಹೇಳಿದ್ದೇನೆ. ಮುಖ್ಯಮಂತ್ರಿಗಳು ಕೂಡ ಅದನ್ನೇ ಹೇಳಿದ್ದಾರೆ. ರಾಷ್ಟ್ರಧ್ವಜಕ್ಕೆ ಅಪಮಾನ ಮಾಡಿದರೆ ನಾವು ಬಿಡಲ್ಲ.ಇವನ್ಯಾರೋ ಕೇಸು ಹಾಕ್ಕೊಂಡ್ರು, ಕಂಪ್ಲೇಂಟ್ ಕೊಟ್ರು ಅಂದಾಕ್ಷಣಾ ಬಂಧಿಸಿ ಬಿಡ್ತಾರಾ? ನಾನು ನಿನ್ನ ಮೇಲೆ ಕೇಸು ಹಾಕ್ತಿನಿ ಬಂಧಿಸಿಬಿಡ್ತಾರಾ..?ಇದಕ್ಕೆ ಪ್ರಜಾಪ್ರಭುತ್ವ ಅಂತಾ ಕರಿತಾರಾ ? ಅವರೊಂದಿಷ್ಟು ಪ್ರಚಾರಕ್ಕೆ ಈ ರೀತಿ ಮಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.