ಬೆಂಗಳೂರು : ಎರಡು ಸ್ಥಾನಗಳಿಗೆ ಕಾಂಗ್ರೆಸ್ ಟಿಕೆಟ್ ಹಂಚಿಕೆ ವಿಚಾರವಾಗಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮತ್ತು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ನಡುವೆ ಸಾಕಷ್ಟು ಭಿನ್ನಾಭಿಪ್ರಾಯ ಉಂಟಾಗಿತ್ತು. ಒಮ್ಮತದ ಅಭ್ಯರ್ಥಿ ಆಯ್ಕೆ ಮಾಡುವ ಬದಲು ಜಿದ್ದಿಗೆ ಬಿದ್ದ ಉಭಯ ನಾಯಕರು ತಮ್ಮ ಬೆಂಬಲಿಗರಿಗೆ ಟಿಕೆಟ್ ನೀಡಬೇಕೆಂದು ಹಠ ಹಿಡಿದಿದ್ರು. ಇದನ್ನು ನೋಡಿದ ಕಾಂಗ್ರೆಸ್ ಹೈಕಮಾಂಡ್ ಬೇರೆ ಅಭ್ಯರ್ಥಿಗಳನ್ನು ಫೈನಲ್ ಮಾಡಿ ಸಿದ್ದು ಮತ್ತು ಡಿಕೆಶಿಗೆ ಶಾಕ್ ನೀಡಿತ್ತು. ಇದರ ಬೆನ್ನಲ್ಲೇ ಹಲವು ಟಿಕೆಟ್ ಆಕಾಂಕ್ಷಿಗಳು ಅಸಮಧಾನ ಹೊರ ಹಾಕಿದ್ರು.
ಅದರಲ್ಲೂ ಮಹಿಳೆಯರಿಗೆ ಆದ್ಯತೆ ನೀಡದೆ ಕೇವಲ ಪುರುಷರಿಗೆ ಅವಕಾಶ ನೀಡಲಾಗುತ್ತಿದೆ ಅಂತ ಕವಿತಾ ರೆಡ್ಡಿ ಮಾಧ್ಯಮಗಳ ಮುಂದೆ ಆಕ್ರೋಶ ಹೊರ ಹಾಕಿದ್ರು. ಇದನ್ನು ಗಮನಿಸಿದ ಕಾಂಗ್ರೆಸ್ ಶಿಸ್ತು ಸಮಿತಿ ಸ್ಪಷ್ಟನೆ ಕೇಳಿ ನೋಟೀಸ್ ಜಾರಿ ಮಾಡಿದೆ.
ಕಾಂಗ್ರೆಸ್ ಒಬಿಸಿ ಘಟಕದ ಅಧ್ಯಕ್ಷ ಎಂ.ಡಿ.ಲಕ್ಷ್ಮೀನಾರಾಯಣ ಕೂಡ ಪರಿಷತ್ ಸ್ಥಾನಕ್ಕೆ ಆಕಾಂಕ್ಷಿಯಾಗಿದ್ರು. ಟಿಕೆಟ್ ನೀಡುವಂತೆ ಸಿದ್ದರಾಮಯ್ಯ ಮತ್ತು ಡಿಕೆಶಿ ಗೆ ಸಾಕಷ್ಟು ಬಾರಿ ಮನವಿ ಕೂಡ ಮಾಡಿದ್ರು. ಅಲ್ಲದೆ ನೇಕಾರ ಸಮುದಾಯದ ಸ್ವಾಮೀಜಿಗಳು ಕೂಡ ಎಂಡಿಎಲ್ ಪರವಾಗಿ ಲಾಬಿ ಕೂಡ ಮಾಡಿದ್ರು. ಇಷ್ಟೆಲ್ಲ ಇದ್ರೂ ಕೂಡ ಲಕ್ಷ್ಮೀನಾರಾಯಣಗೆ ಟಿಕೆಟ್ ಮಿಸ್ ಆಗಿದೆ. ಕೆಪಿಸಿಸಿಯಲ್ಲಿ ಚುನಾವಣೆ ಸಮಿತಿ ಇದಂತೆ ಕಾಣುತ್ತಿಲ್ಲ. ಯಾಕಂದ್ರೆ, ಈಗ ಆಯ್ಕೆ ಮಾಡಿರುವ ಅಭ್ಯರ್ಥಿಗಳನ್ನು ಯಾವ ಮಾನದಂಡದ ಆಧಾರದ ಮೇಲೆ ಟಿಕೆಟ್ ನೀಡಲಾಗಿದೆ. ಇದರ ಬಗ್ಗೆ ಚರ್ಚೆ ಮಾಡಲು ಅವಕಾಶ ನೀಡಬೇಕು ಅಂತ ಡಿ.ಕೆ.ಶಿವಕುಮಾರ್‌ಗೆ ಲಕ್ಷ್ಮೀನಾರಾಯಣ್ ಪತ್ರ ಬರೆದಿದ್ದಾರೆ.
ಇನ್ನೂ ಕಾಂಗ್ರೆಸ್‌ನಲ್ಲಿ ದೊಡ್ಡವರಿಗೊಂದು ನ್ಯಾಯ, ಚಿಕ್ಕ ನಾಯಕರಿಗೊಂದು ನ್ಯಾಯ ಅನ್ನುವಂತಾಗಿದೆ. ಟಿಕೆಟ್ ಸಿಕ್ಕಿಲ್ಲ ಅಂತ ಅಸಮಾಧಾನ ಹೊರಹಾಕಿದ್ದಕ್ಕೆ ಕವಿತಾ ರೆಡ್ಡಿಗೆ ನೋಟಿಸ್ ನೀಡಲಾಗಿದೆ. ಆದ್ರೆ, ಶಾಸಕ ಜಮೀರ್ ಸಾಕಷ್ಟು ಬಾರಿ ಪಕ್ಷದ ನಿಯಮ ಉಲ್ಲಂಘನೆ ಮಾಡಿದ್ರೂ ಕೂಡ ಅವರಿಗೆ ನೋಟಿಸ್ ಜಾರಿ ಮಾಡುವ ತಾಕತ್ತು ಕಾಂಗ್ರೆಸ್ ಶಿಸ್ತು ಸಮಿತಿ ತೋರಿಸಿಲ್ಲ. ಹಾಗಾಗಿ ಅಭ್ಯರ್ಥಿಗಳ ಆಯ್ಕೆ ಮಾನದಂಡ ಮತ್ತು ತಾರತಮ್ಯದ ಬಗ್ಗೆ ಕಾಂಗ್ರೆಸ್‌ನಲ್ಲಿ ಆಂತರಿಕ ಪ್ರಜಾಪ್ರಭುತ್ವ ಇದೆಯಾ ಎಂಬ ಪ್ರಶ್ನೆ ಹುಟ್ಟುವಂತಾಗಿದೆ.