ಮಂಗಳೂರು: ಮಳಲಿ ಮಸೀದಿ ವಿವಾದಕ್ಕೆ ಮತ್ತೊಂದು ಬಲ ಬಂದಿದೆ. ಮಸೀದಿ ನವೀಕರಣ ವೇಳೆ ಪತ್ತೆಯಾದ ದೇವಸ್ಥಾನದ ಪರಿಕರಗಳನ್ನೆ ಅಸ್ತ್ರವಾಗಿ ಬಳಸಿಕೊಂಡಿದ್ದ ಹಿಂದೂ ಸಂಘಟನೆಗಳು, ಮಳಲಿ ಮಸೀದಿಯಲ್ಲಿ ದೈವೀ ಶಕ್ತಿಯಿರುವ ಬಗ್ಗೆ ತಾಂಬೂಲ ಪ್ರಶ್ನೆಗೆ ದಿನ ನಿಗದಿ ಮಾಡಿದ್ದರು. ಬೆಳಗ್ಗೆ ಪೊಳಲಿ ರಾಜರಾಜೇಶ್ವರಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ವಿಶ್ವ ಹಿಂದೂ ಪರಿಷತ್ ಕಾರ್ಯಕರ್ತರು, ಮಸೀದಿಯ ಅಣತಿ ದೂರದಲ್ಲಿರುವ ಶ್ರೀರಾಮಾಂಜನೇಯ ಭಜನಾ ಮಂದಿರದಲ್ಲಿ ಪ್ರಶ್ನೆ ಚಿಂತನೆ ನಡೆಸಿದ್ದರು.ಕೇರಳದ ಖ್ಯಾತ ಜ್ಯೋತಿಷಿ ಗೋಪಾಲಕೃಷ್ಣ ಪಣಿಕ್ಕರ್ ಪ್ರಶ್ನೆ ಚಿಂತನೆ ಆರಂಭಿಸಿದ್ದು, ಸ್ಥಳೀಯ ನಿವಾಸಿ ಉಳಿಪ್ಪಾಡಿ ಗುತ್ತಿನ ಉದಯ ಕುಮಾರ್ ಶೆಟ್ಟಿ ತಾಂಬೂಲ ಪ್ರಶ್ನೆಯ ಯಜಮಾನಿಕೆ ವಹಿಸಿ 9 ವೀಳ್ಯದೆಲೆ ಜ್ಯೋತಿಷ್ಯರಿಗೆ ನೀಡಿ ತಾಂಬೂಲ ಪ್ರಶ್ನೆ ಕೇಳಿದರು. ಜ್ಯೋತಿಷ್ಯ ಶಾಸ್ತ್ರದ ಮೂಲಕ ಪ್ರತಿಕ್ರಿಯೆ ನೀಡಿದರ ಗೋಪಾಲಕೃಷ್ಣ ಪಣಿಕ್ಕರ್ ಗುರುಬಲ ಇದೆ. ಮೂರು ಆರೂಢದಲ್ಲಿ ಗುರುಬಲ ಇಲ್ಲ,ಈ ಜಾಗದಲ್ಲಿ ಹಿಂದೆ ದೇವಸ್ಥಾನ ಇದ್ದ ಭೂಮಿ ಎನ್ನುವುದು ತಿಳಿದು ಬರುತ್ತದೆ ಎಂದರು.
ಸಾಮಾನ್ಯವಾಗಿ ತಾಂಬೂಲ ಪ್ರಶ್ನೆಯಲ್ಲಿ ಯಾವ ದೈವ ಸಾನಿಧ್ಯ ಅಂತ ಹೇಳಲು ಅಸಾಧ್ಯ, ಆದರೆ ಈ ಜಾಗ ಹಿಂದಿನ ಕಾಲದಲ್ಲಿ ಮಠ,ಆರಾಧನೆ ಸ್ಥಳವಾಗಿರುವ ಬಗ್ಗೆ ಕಂಡು ಬರುತ್ತಿದೆ ಎಂದ ಜ್ಯೋತಿಷಿಗಳು ಮುಂದಿನ ದಿನಗಳಲ್ಲಿ ಅಷ್ಟಮಂಗಳ ನಡೆಯುವ ಅಷ್ಟಮಂಗಳ ಪ್ರಶ್ನೆ ಮೂಲಕ ಎಲ್ಲಾ ಗೋಚರವಾಗುತ್ತದೆ ಎಂದರು. ಸದ್ಯ ಈ ಹಿಂದೆ ಮಳಲಿ ಸುತ್ತಮುತ್ತ ಲಿಂಗಾಯತ ಮಠಗಳಿದ್ದು ಯಾವುದೋ ಒಂದು ಕಾಲದಲ್ಲಿ ಈ ಮಠ ನಾಶವಾದ ಶಂಕೆಯಿದೆ. ಇನ್ನೊಂದು ಎತ್ತರದ ಪ್ರದೇಶದಲ್ಲಿ ಲಿಂಗಾಯತ ಮಠವಿದೆ. ಅದು ಅಲ್ಲಿ ಹುಡುಕಿದರೆ ಸಾಕಷ್ಟು ಅವಶೇಷಗಳು ಸಿಗುವ ಸಾಧ್ಯತೆಯಿದೆ ಎನ್ನುವ ಮೂಲಕ ಈ ಜಾಗ ಲಿಂಗಾಯತ ಸಮುದಾಯದಕ್ಕೆ ಸೇರಿದ್ದು ಎಂದು ಜ್ಯೋತಿಷ್ಯ ಶಾಸ್ತ್ರ ಮೂಲಕ ಗೋಪಾಲಕೃಷ್ಣ ಪಣಿಕ್ಕರ್ ತಿಳಿಸಿದರು.
ಈ ಹಿಂದೆ ಈ ಜಾಗದಲ್ಲಿ ದೈವಿಶಕ್ತಿ ಬಗ್ಗೆ ಬಲವಾದ ನಂಬಿಕೆ ವ್ಯಕ್ತಪಡಿಸಿದ್ದ ವಿಶ್ವಹಿಂದೂ ಪರಿಷತ್ ಮಸೀದಿ ಜಾಗವನ್ನ ಹಿಂದೂಗಳಿಗೆ ಬಿಟ್ಟುಕೊಡಲು ಆಗ್ರಹಿಸಿದೆ.ಈ ಬಗ್ಗೆ ನ್ಯಾಯಾಲಯದಲ್ಲಿ ದಾಖಲೆಗಳನ್ನ ಸಲ್ಲಿಸಿದ್ದು, ಮುಂದಿನ ದಿನಗಳಲ್ಲಿ ಕಾನೂನು ಹೋರಾಟ ಮೂಲಕ ಜಾಗವನ್ನ ಹಿಂಪಡೆಯಲು ತೀರ್ಮಾನಿಸಿದೆ.
ಸದ್ಯ ಈ ಜಾಗವನ್ನು ವಿವಾದಿತ ಪ್ರದೇಶವೆಂದು ಘೋಷಿಸಿರುವ ಜಿಲ್ಲಾಡಳಿತ ಯಾವುದೇ ಅಹಿತಕರ ಘಟನೆ ನಡೆಯದಂತೆ ಮಸೀದಿ ಸುತ್ತಮುತ್ತ ಪೊಲೀಸ್ ಸರ್ಪಗಾವಲು ಹಾಕಿದೆ.