ಹಿಂದಿ ರಾಷ್ಟ್ರೀಯ ಭಾಷೆ ಅನ್ನೋ ಬಗ್ಗೆ ಸಿಕ್ಕಾಪಟ್ಟೆ ತರ್ಕಗಳು ನಡಿತಿವೆ. ಜೊತೆಗೆ, ಕಾಲು ಕೆರೆದು ಜಗಳಕ್ಕೆ ನಿಂತಿರುವ ಉತ್ತರದ ಮಂದಿಗೆ ಸ್ಯಾಂಡಲ್‌ವುಡ್ ಸೇರಿ ದಕ್ಷಿಣ ಭಾರತದ ಹಲವು ಸ್ಟಾರ್‌ಗಳು ಕಿಡಿಕಾರಿದ್ರು. ಆದ್ರೆ, ಹೀಗೆ ಭಾಷೆಗಳ ಮಧ್ಯೆ ಬೆಂಕಿ ಹಚ್ಚೋರಿಗೆ ಮೋದಿ ಮಾತು ಬೆಂಕಿಯುಂಡೆಯಾದ್ರೂ ಆಶ್ಚರ್ಯವಿಲ್ಲ.
ಹೌದು, ಹಿಂದಿ ಭಾರತದ ರಾಷ್ಟ್ರ ಭಾಷೆ ಅಲ್ಲ ಎಂಬ ಕನ್ನಡದ ನಟ ಕಿಚ್ಚ ಸುದೀಪ್ ಹೇಳಿಕೆಗೆ ಬಾಲಿವುಡ್ ನಟ ಅಜಯ್ ದೇವಗನ್ ಟ್ವಿಟ್ಟರ್ನಲ್ಲಿ ಪ್ರತಿಕ್ರಿಯಿಸಿದ್ದು, ಇತ್ತೀಚೆಗೆ ಭಾಷೆಗಳ ಚರ್ಚೆಯನ್ನು ಹುಟ್ಟು ಹಾಕಿತ್ತು. ಇದೀಗ ಖುದ್ದು ಪ್ರಧಾನಿ ನರೇಂದ್ರ ಮೋದಿ ಅವರು ಪ್ರಾದೇಶಿಕ ಭಾಷೆಗಳ ಬಗ್ಗೆ ಮಾತನಾಡಿದ್ದಾರೆ.
ಭಾಷೆಗಳ ಆಧಾರದ ಮೇಲೆ ವಿವಾದಗಳನ್ನು ಹುಟ್ಟುಹಾಕಲು ಪ್ರಯತ್ನಿಸುತ್ತಿದ್ದಾರೆ. ಬಿಜೆಪಿಯು ಪ್ರತಿಯೊಂದು ಪ್ರಾದೇಶಿಕ ಭಾಷೆಯಲ್ಲಿ ಭಾರತೀಯ ಸಂಸ್ಕೃತಿಯ ಪ್ರತಿಬಿಂಬವನ್ನು ನೋಡುತ್ತದೆ. ಅವುಗಳನ್ನು ಪೂಜಿಸಲು ಯೋಗ್ಯವೆಂದು ಪರಿಗಣಿಸುತ್ತದೆ. NEP ಯಲ್ಲಿ ನಾವು ಪ್ರತಿಯೊಂದು ಪ್ರಾದೇಶಿಕ ಭಾಷೆಗೆ ಪ್ರಾಮುಖ್ಯತೆ ನೀಡಿದ್ದೇವೆ ಎಂದು ಹೇಳಿದ್ರು.
ಬಿಜೆಪಿಯು ಭಾರತೀಯ ಭಾಷೆಗಳನ್ನು ಭಾರತದ ಆತ್ಮ ಮತ್ತು ರಾಷ್ಟ್ರದ ಉತ್ತಮ ಭವಿಷ್ಯಕ್ಕೆ ಕೊಂಡಿ ಎಂದು ಪರಿಗಣಿಸುತ್ತದೆ ಎಂದು ಜೈಪುರದಲ್ಲಿ ಬಿಜೆಪಿ ರಾಷ್ಟ್ರೀಯ ಪದಾಧಿಕಾರಿಗಳ ಸಭೆಯನ್ನು ಉದ್ದೇಶಿಸಿ ಪ್ರಧಾನಿ ಮೋದಿ ಹೇಳಿದರು.
ಈ ವರ್ಷದ ಕೊನೆಯಲ್ಲಿ ಗುಜರಾತ್ ಮತ್ತು ಹಿಮಾಚಲ ಪ್ರದೇಶದಲ್ಲಿ ವಿಧಾನಸಭಾ ಚುನಾವಣೆಗಳು ನಡೆಯಲಿದ್ದು, ಛತ್ತೀಸ್ಗಢ, ರಾಜಸ್ಥಾನ, ತೆಲಂಗಾಣ, ತ್ರಿಪುರಾ, ಮಧ್ಯಪ್ರದೇಶ, ಕರ್ನಾಟಕ, ಮೇಘಾಲಯ, ಮಿಜೋರಾಂ ಮತ್ತು ನಾಗಾಲ್ಯಾಂಡ್ ನಲ್ಲಿ ಮುಂದಿನ ವರ್ಷ ಚುನಾವಣೆ ನಡೆಯಲಿದೆ. ಈ ಮಧ್ಯೆ, ಭಾಷಾ ಯುದ್ಧ ಜೋರಾಗಿದ್ದು, ಇದು ಚುನಾವಣೆ ಮೇಲೆ ಪರಿಣಾಮ ಬೀರಲಿದೆ ಅನ್ನೋದನ್ನು ಮೋದಿ ಮನಗಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಭಾಷಾ ಯುದ್ಧದ ವಿಚಾರದಲ್ಲಿ ಮೌನ ಮುರಿದಿದ್ದು, ವಿಷ ಬೀಜ ಬಿತ್ತುವವರಿಗೆ ಎಚ್ಚರಿಕೆ ನೀಡಿದ್ದಾರೆ.