ಬೆಂಗಳೂರು: ಕಂಡ ಕಂಡ ಖಾಲಿ ಸೈಟು ಗುರುತಿಸಿ ಮಾಲೀಕರ ಹೆಸರಿನಲ್ಲಿ ನಕಲಿ ದಾಖಲಾತಿ ಸೃಷ್ಟಿಸಿ ಬೇರೆಯವರಿಗೆ ಮಾರಿ ಲಕ್ಷಾಂತರ ರೂಪಾಯಿ ಅಕ್ರಮವಾಗಿ ಸಂಪಾದಿಸಿದ್ದ ಐವರನ್ನು ವಿದ್ಯಾರಣ್ಯಪುರ ಪೊಲೀಸರು ಬಂಧಿಸಿದ್ದಾರೆ. ನರಸೀಪುರ ನಿವಾಸಿ ಸುವರ್ಣಮ್ಮ ಎಂಬುವರು ನೀಡಿದ ದೂರಿನ ಮೇರೆಗೆ ಕಬೀರ್ ಆಲಿ, ಫೈಜ್ ಸುಲ್ತಾನ, ಕಲ್ಪನಾ, ಯೋಗೇಶ್ ಹಾಗೂ ಪೂಜಾ ಎಂಬುವರನ್ನು ಬಂಧಿಸಿ ಜೈಲಿಗಟ್ಟಲಾಗಿದೆ.
ಹೆಚ್ಎಂಟಿ ಕಂಪನಿಯ ನಿವೃತ್ತ ಉದ್ಯೋಗಿ ಸುವರ್ಣಮ್ಮ ಎಂಬುವರಿಗೆ 1988ರಲ್ಲಿ ಹೆಚ್ಎಂಟಿ ಲೇಔಟ್ ನಲ್ಲಿ ಸೈಟ್ ಹಂಚಿಕೆಯಾಗಿತ್ತು. ಆದ್ರೆ ಆರೋಪಿಗಳು ಸುವರ್ಣಮ್ಮಗೆ ಗೊತ್ತಾಗದಂತೆ ತಮ್ಮ ಹೆಸರಿನಲ್ಲಿ ರಿಜಿಸ್ಟ್ರೇಷನ್ ಮಾಡಿಸಿಕೊಂಡಿದ್ದರು. ಕೆಲ ತಿಂಗಳ ಬಳಿಕ ಸುವರ್ಣಮ್ಮ ಸೈಟ್ ಬಳಿ ತೆರಳಿದ್ದಾಗ ತನ್ನ ಹೆಸರಿನ ಮೂಲಕವೇ ಸೈಟ್ ಮಾರಾಟ ಮಾಡಿ ವಂಚಿಸಲಾಗಿದೆ ಎಂದು ಗೊತ್ತಾಗಿತ್ತು. ತಕ್ಷಣ ಸುವರ್ಣಮ್ಮ ವಿದ್ಯಾರಣ್ಯಪುರ ಠಾಣೆಗೆ ದೂರು ನೀಡಿದ್ರು.
ಆರೋಪಿಗಳು ಕಬೀರ್ ಆಲಿ ನಗರದಲ್ಲಿ ಖಾಲಿ ಸೈಟುಗಳನ್ನು ಗುರುತಿಸಿಕೊಂಡು ಅಕ್ಕಪಕ್ಕದವರನ್ನು ವಿಚಾರಿಸಿ ಸೈಟು ಮಾಲೀಕರ ಹೆಸರು ಹಾಗೂ ವಿವರಗಳನ್ನು ಪಡೆದುಕೊಳ್ಳುತ್ತಿದ್ದರು. ಅದೇ ರೀತಿ ಸುವರ್ಣಮ್ಮಗೆ ಸೇರಿದ ಸೈಟಿನ ಕಾಗದ ಪತ್ರಗಳನ್ನು ನಕಲಿಯಾಗಿ ಸೃಷ್ಟಿಸಿಕೊಂಡಿದ್ದರು. ಸುವರ್ಣಮ್ಮರ ಮಗಳು ಎಂದು ಕಲ್ಪನಾಳನ್ನ ರೆಡಿ ಮಾಡಿ ಆಕೆಗೆ ದಾನ ಮಾಡಿರುವುದಾಗಿ, ಆಕೆಯಿಂದ ಆಕೆಯ ಗಂಡ ಯೋಗೇಶ್ ಸೈಟು ಹಸ್ತಾಂತರಿಸಿದ್ದ. ಬಳಿಕ ಪೈಜ್ ಸುಲ್ತಾನ ಹೆಸರಿನಲ್ಲಿ ಅಗ್ರಿಮೆಂಟ್ ಮಾಡಿಕೊಂಡು ಮತ್ತೋರ್ವ ಆರೋಪಿ ಯೊಗೇಶ್ ಮುಖಾಂತರ ವೆಂಕಟಸ್ವಾಮಿ ಅವರಿಗೆ 65 ಲಕ್ಷ ರೂಪಾಯಿಗೆ ಮಾರಿದ್ದಾರೆ. ಬಂದ ಹಣದಲ್ಲಿ ಸಹಚರರಿಗೆ ಕಮಿಷನ್ ನೀಡಿ ಉಳಿದ ಹಣವನ್ನು ಕಬೀರ್ ಹಾಗೂ ಫೈಜ್ ಸುಲ್ತಾನ ಮೋಜು ಮಸ್ತಿ ಮಾಡಿದ್ರು.
ವಿಚಿತ್ರವೆಂದ್ರೆ ವಂಚನೆ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿರುವ ಪೈಜ್ ಸುಲ್ತಾನ ಪಧವೀಧರೆ.ಈಕೆ ವೈಯಕ್ತಿಕ ಕಾರಣಕ್ಕಾಗಿ ಗಂಡನನ್ನು ತೊರೆದಿದ್ದಳು. ಪರಿಚಿತ ಕಬೀರ್ ಜೊತೆ ಸೇರಿ ವಂಚನೆ ಮಾರ್ಗ ಕಂಡುಕೊಂಡಿದ್ದಳು. ಪೊಲೀಸರಿಗೆ ಅನುಮಾನ ಬಾರದಿರಲು ನಕಲಿ ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್ ಮಾಡಿಸಿಕೊಂಡಿದ್ದರು.ಹಣ ಬ್ಯಾಂಕಿನಲ್ಲಿ ಜಮೆಯಾಗುತ್ತಿದ್ದಂತೆ ಆರೋಪಿಗಳು ಮೊಬೈಲ್ ಸ್ವಿಚ್ ಆಫ್ ಮಾಡಿಕೊಳ್ಳುತ್ತಿದ್ದರು.ಸದ್ಯ ಆರೋಪಿಗಳನ್ನು ಬಂಧಿಸಿರುವ ಪೊಲೀಸರು 102 ಗ್ರಾಂ ಚಿನ್ನಾಭರಣ ಹಾಗೂ ಕೃತ್ಯಕ್ಕೆ ಬಳಸಿದ್ದ ಟಾಟಾ ಸಫಾರಿ ಕಾರು ಜಪ್ತಿ ಮಾಡಿಕೊಂಡಿದ್ದಾರೆ.