ಬೆಂಗಳೂರು: ಕರ್ನಾಟಕದಲ್ಲಿ ಮುಂಗಾರು ಪೂರ್ವ ಮಳೆಯ ಅಬ್ಬರ ಜೋರಾಗಿದೆ. ರಾಜ್ಯಾದ್ಯಂತ ಅಬ್ಬರಿಸಿ ಬೊಬ್ಬಿರಿಯುವತ್ತಿರುವ ಮಳೆಯ ಮಧ್ಯೆ ಹವಾಮಾನ ಇಲಾಖೆ ಎಚ್ಚರಿಕೆ ಕೊಟ್ಟಿದ್ದು, ಮತ್ತೆ ಮೂರು ದಿನ ಭಾರಿ ಮಳೆ ಮಳೆ ಮುನ್ಸೂಚನೆ ನೀಡಿದ್ದಾರೆ. ದಕ್ಷಿಣ ಒಳನಾಡು, ಕರಾವಳಿ ಸೇರಿ ರಾಜ್ಯದ 7 ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಘೋಷಣೆ ಮಾಡಲಾಗಿದೆ. ಉತ್ತರ ಒಳನಾಡಿನಲ್ಲಿ ಎರಡು ದಿನ ಯೆಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದ್ದು, ಮೀನುಗಾರಿಕೆಗೆ ಬ್ರೇಕ್ ಹಾಕಲಾಗಿದೆ.
ರಾಜಧಾನಿ ಬೆಂಗಳೂರಿನ ಜನರಿಗೆ ಮಳೆ ಕೊಂಚ ಬಿಡುವು ನೀಡಿದೆ. ಆದರೂ ಮೋಡ ಕವಿದ ವಾತಾವರಣದ ಜೊತೆ ಚಳಿ ಗಾಳಿ ಮುಂದುವರೆದಿದೆ. ಇನ್ನು ಮಳೆ ನಿಂತರೂ ಅದರಿಂದ ಉಂಟಾದ ಅವಾಂತರಗಳು ಮುಂದುವರೆದಿದೆ. ಹಲವು ಕಡೆ ತಗ್ಗು ಪ್ರದೇಶಗಳಲ್ಲಿ ಮನೆಗಳಿಗೆ ಕೊಳಚೆ ನೀರು ನುಗ್ಗಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ. ಈ ಹಿನ್ನೆಲೆಯಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಮಳೆ ಹಾನಿ ಪ್ರದೇಶಗಳಿಗೆ ಮಚ್ಚೆ ಭೇಟಿ ನೀಡಿದ್ರು. ರಾಮಮೂರ್ತಿ ನಗರ, ಹೊರಮಾವು ಶ್ರೀಸಾಯಿ ಲೇಔಟ್ ಸೇರಿದಂತೆ ಕೆಲವು ಪ್ರದೇಶಗಳಿಗೆ ಭೇಟಿ ನೀಡಿದ ಸಿಎಂ, ಸ್ಥಳೀಯರ ಸಮಸ್ಯೆ ಆಲಿಸಲೇ ಇಲ್ಲ. ಕೇವಲ ಅಧಿಕಾರಿಗಳು, ಇಂಜಿನಿಯರ್ ಕೊಡುವ ಮಾಹಿತಿ ಪಡೆದು ವಾಪಸ್ಸಾಗಿದ್ದಾರೆ.
ಸಿಎಂ ಕೇವಲ ಕಾಟಾಚಾರಕ್ಕೆ ಭೇಟಿ ಕೊಟ್ರು, ನಮ್ಮ ಅಹವಾಲು ಕೇಳಲಿಲ್ಲ. ಒಳಗೆ ಬಂದು ಏನೆಂದು ಪರಿಸ್ಥಿತಿ ನೋಡಲಿಲ್ಲ, ರಸ್ತೆಯಲ್ಲೇ ನಿಂತು ನೋಡಿ ಹೊರಟರು ಅಂತ ಜನ ಆಕ್ರೋಶ ಹೊರಹಾಕಿದ್ರು. ಬರೀ ಆಶ್ವಾಸನೆ ಕೊಟ್ಟು ಹೋಗ್ತಿದ್ದಾರೆ. ಅಲ್ಲೇ ನಿಂತು ಹೋಗೋಕೆ ಯಾಕೆ ಬರ್ಬೇಕು ಅಂತ ಪ್ರಶ್ನಿಸಿದ್ರು.
ದಾಸರಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಹಾನಿಗೊಳಗಾದ ಪ್ರದೇಶಗಳಿಗೆ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಭೇಟಿ ನೀಡಿ ಜನರ ಸಮಸ್ಯೆ ಆಲಿಸಿದ್ರು. ದಾಸರಹಳ್ಳಿಯ ವಿವಿಧ ಬಡಾವಣೆಗೆ ಭೇಟಿ ನೀಡಿದ ಕುಮಾರಸ್ವಾಮಿ ಅವರು ಮೊದಲಿಗೆ ರುಕ್ಮಿಣಿ ನಗರದ ರಾಜಕಾಲುವೆ ಪರಿಶೀಲನೆ ನಡೆಸಿದ್ರು. ಬಳಿಕ ಸಿದ್ದಾರ್ಥ ಕಾಲೋನಿಗೆ ಭೇಟಿ ಕೊಟ್ಟು, ಜನರು ಸಮಸ್ಯೆಗಳನ್ನು ಕೇಳಿದ್ರು. ಜನರಿಗೆ ಫುಡ್ ಕಿಟ್ ವಿತರಣೆ ಮಾಡಿದ್ರು, ಜೊತೆಗೆ ಧನ ಸಹಾಯ ಮಾಡಿದ್ರು ಬಳಿಕ ಮಾತನಾಡಿದ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಕಾಂಗ್ರೆಸ್ ಮತ್ತು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ರು.
ಸಿಎಂ ಕಾಟಾಚಾರಕ್ಕೆ ಭೇಟಿ ಕೊಟ್ಟು ಹೋಗ್ತಿದ್ದಾರೆ. ವಿಪಕ್ಷ ನಾಯಕರ ರೌಂಡ್ಸ್ ಕೂಡ ಅಷ್ಟಕ್ಕೆ ಅಷ್ಟೆ. ಈ ಮಧ್ಯೆ, ಕುಮಾರಸ್ವಾಮಿ ಕೂಡ ಮಳೆ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಜನರಿಗೆ ಕೊಂಚ ಧೈರ್ಯ ತುಂಬಿ ಬಂದಿದ್ದಾರೆ. ಆದ್ರೆ, ನಮ್ಮ ನಾಡದೊರೆಗೆ ಯಾಕೆ ಈ ತಾತ್ಸಾರ ಅಂತ ಜನರು ಕಿಡಿ ಕಾರುತ್ತಿದ್ದಾರೆ.