Friday, November 22, 2024

ಮಳೆಯ ಅಬ್ಬರ : ಶಾಶ್ವತ ಪರಿಹಾರಕ್ಕೆ ಬಿ.ವೈ. ರಾಘವೇಂದ್ರ ಒತ್ತಾಯ

ಶಿವಮೊಗ್ಗ: ಜಿಲ್ಲೆಯಲ್ಲಿ ಹಿಂದೆಂದೂ ಕಾಣದ ಭೀಕರ ಮಳೆ ನಿನ್ನೆ ಒಂದೇ ದಿನದಲ್ಲಿ ಬಂದಿದ್ದು, ಅಪಾರ ಹಾನಿಯನ್ನುಂಟು ಮಾಡಿದೆ. ಸರ್ಕಾರದಿಂದ ಸಂತ್ರಸ್ಥರಿಗೆ ನೆರವು ನೀಡುವುದಲ್ಲದೇ ಶಾಶ್ವತ ಪರಿಹಾರಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದು ಸಂಸದ ಬಿ.ವೈ. ರಾಘವೇಂದ್ರ ಹೇಳಿದ್ದಾರೆ. ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಮೇ ತಿಂಗಳಲ್ಲಿ ಬೀಳುವ ವಾಡಿಕೆ ಮಳೆಯ 4 ರಷ್ಟು ಹೆಚ್ಚಿನ ಪ್ರಮಾಣದಲ್ಲಿ ಧಾರಾಕಾರವಾಗಿ ಮಳೆಯಾಗಿದ್ದರಿಂದ ಅಪಾರ ಹಾನಿಯಾಗಿದೆ. ನಿನ್ನೆಯಿಂದಲೇ ಅಧಿಕಾರಿಗಳು ಸ್ಥಳಕ್ಕೆ ತೆರಳಿ ಹಾನಿಯ ಅಂದಾಜು ಮಾಡುತ್ತಿದ್ದಾರೆ. ಕಂಟ್ರೋಲ್ ರೂಂ ಸ್ಥಾಪಿಸಲಾಗಿದೆ. 9 ಕಡೆ ಕಾಳಜಿ ಕೇಂದ್ರಗಳನ್ನು ಸ್ಥಾಪಿಸಿ ಮನೆಗೆ ನೀರು ನುಗ್ಗಿದವರಿಗೆ ಆಹಾರದ ವ್ಯವಸ್ಥೆ ಮಾಡಲಾಗಿದೆ. ನಗರದಲ್ಲಿ 7 ಮನೆಗಳು ಭಾಗಶಃ ಬಿದ್ದಿವೆ. ಜಿಲ್ಲೆಯಲ್ಲಿ ಒಟ್ಟು 12 ಮನೆಗಳು ಬಿದ್ದಿವೆ ಎಂದಿದ್ದಾರೆ.

ಇನ್ನು ಅಧಿಕಾರಿಗಳು ರಜೆ ಹಾಕದಂತೆ ಹಗಲು, ರಾತ್ರಿ ಕೆಲಸ ಮಾಡುವಂತೆ ಸೂಚಿಸಲಾಗಿದೆ. ನಿನ್ನೆ ಸಂಜೆ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಶಿವಮೊಗ್ಗ ಜಿಲ್ಲೆ ಮತ್ತು ಬೈಂದೂರು ಕ್ಷೇತ್ರದ ನೆರೆ ಹಾನಿ ಬಗ್ಗೆ ಮಾಹಿತಿ ನೀಡಿ ನೆರವಿಗೆ ಮನವಿ ಮಾಡಲಾಗಿದೆ ಎಂದರು. ಜಿಲ್ಲೆಯಲ್ಲಿ ಸುಮಾರು 4 -5 ಸಾವಿರ ತಗ್ಗು ಪ್ರದೇಶದ ಮತ್ತು ಚಾನಲ್ ದಂಡೆಯಲ್ಲಿರುವ ಮನೆಗಳಿಗೆ ನೀರು ನುಗ್ಗಿದೆ. ಸಾಮಗ್ರಿಗಳು ನಷ್ಟವಾಗಿವೆ. ಬೆಳೆ ಹಾನಿಯಾಗಿದೆ. ಅಪಾರ ಪ್ರಮಾಣದಲ್ಲಿ ಮೆಕ್ಕೆ ಜೋಳಕ್ಕೆ ಹಾನಿಯಾಗಿದೆ. ಎಪಿಎಂಸಿಯಲ್ಲಿ ಒಣಗಿಸಿದ್ದ ಬೆಳೆಗೆ ಫಂಗಸ್ ಬಂದಿದ್ದು, ಅದಕ್ಕೂ ಕೂಡ ಪರಿಹಾರ ನೀಡಬೇಕೆಂದು ಮನವಿ ಮಾಡಿದ್ದೇನೆ. ಜನರ ಸಂಕಷ್ಟಕ್ಕೆ ಸ್ಪಂದಿಸುವ ಪ್ರಯತ್ನ ಶಕ್ತಿ ಮೀರಿ ಮಾಡುತ್ತಿದ್ದೇವೆ. ಪದೇ ಪದೇ ನೀರು ನುಗ್ಗುವ ತಗ್ಗು ಪ್ರದೇಶಗಳನ್ನು ಸ್ಥಳಾಂತರ ಮಾಡುವ ಬಗ್ಗೆಯೂ ಪ್ರಸ್ತಾವನೆಗೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದಿದ್ದಾರೆ.

ನಗರದ ನಿರ್ಮಲಾ ನರ್ಸಿಂಗ್ ಹೋಂ ಬಳಿಯ ಚಾನಲ್ ದಂಡೆಯ ಅಕ್ಕಪಕ್ಕ, ವೆಂಕಟೇಶ್ ನಗರ, ರಾಜೇಂದ್ರ ನಗರ, ಗಾಂಧಿ ನಗರ, ರವೀಂದ್ರ ನಗರ, ವಿನಾಯಕ ನಗರ, ಬಾಪೂಜಿ ನಗರ, ಶಾಂತಮ್ಮ ಲೇಔಟ್ ಗಳಿಗೆ ಭೇಟಿ ನೀಡಿ ಸಾರ್ವಜನಿಕರ ಸಮಸ್ಯೆಯನ್ನು ಆಲಿಸಿ, ಅಧಿಕಾರಿಗಳಿಗೆ ಸೂಕ್ತ ಕ್ರಮಕ್ಕೆ ಆದೇಶಿಸಲಾಗಿದೆ. ವೆಂಕಟೇಶ ನಗರದಲ್ಲಿ ಆಹಾರ ಪೊಟ್ಟಣಗಳನ್ನು ವಿತರಿಸಲಾಗಿದೆ. ಶಾಶ್ವತ ಪರಿಹಾರಕ್ಕೆ ಸಂಬಂಧಿಸಿದಂತೆ ಭಾನುವಾರ ಅಧಿಕಾರಿಗಳ ಸಭೆ ನಡೆಸಲಾಗುವುದು ಎಂದಿದ್ದಾರೆ.

RELATED ARTICLES

Related Articles

TRENDING ARTICLES