ಕೋಲಾರ: ಡ್ರೋನ್ ದೊಡ್ಡ ದೊಡ್ಡ ಸಭೆಗಳಲ್ಲಿ ದೃಶ್ಯ ಚಿತ್ರೀಕರಿಸಲು ಹಾಗೂ ಭದ್ರತೆಗೆ ಬಳಸುವ ಸಾಧನವಾಗಿತ್ತು.. ಆದ್ರೆ, ಈಗ ರೈತರ ಹೊಲ ಗದ್ದೆಗಳ ಮೇಲೆ ಹಾರಾಡುತ್ತಾ, ರಾಸಾಯನಿಕ ಸಿಂಪಡಿಸುತ್ತಿದೆ.
ಕೋಲಾರ ತಾಲೂಕಿನ ತೂರಾಂಡಹಳ್ಳಿ ಗ್ರಾಮದ ರೈತರು ಇಂತಹದೊಂದು ಹೊಸ ಪ್ರಯೋಗಕ್ಕೆ ಮುಂದಾಗಿದ್ದಾರೆ. ಅದೆಷ್ಟೇ ತಂತ್ರಜ್ಞಾನ ಬಳಸಿಕೊಂಡು ಕೃಷಿ ಮಾಡಿದ್ರೂ ಸಹ ಕೂಲಿಗಾರರ ಸಮಸ್ಯೆ ಮಾತ್ರ ತಪ್ಪಿದಲ್ಲ. ಇದನ್ನು ತಪ್ಪಿಸಲು ಕೃಷಿ ಇಲಾಖೆಯ ಸಹಯೋಗದೊಂದಿಗೆ ರಾಷ್ಟ್ರೀಯ ಕೆಮಿಕಲ್ ಆ್ಯಂಡ್ ಫರ್ಟಿಲೈಸರ್ಸ್ ಕಂಪನಿಯವ್ರು ನುರಿತ ತಂತ್ರಜ್ಞರ ಮೂಲಕ ಗ್ರಾಮದ ರೈತರಿಗೆ ಡ್ರೋನ್ ತಂತ್ರಜ್ಜಾನದ ಮೂಲಕ ಔಷಧಿ ಸಿಂಪಡಣೆ ಮಾಡುವುದನ್ನು ಪರಿಚಯಿಸಿದ್ದಾರೆ.
ಇನ್ನು, ಈ ಡ್ರೋನ್ ಸಾಧನಕ್ಕೆ ಜಿಪಿಎಸ್ ಅಳವಡಿಸಲಾಗಿದೆ. ತೋಟದ ಬದುವಿನಲ್ಲೇ ಕುಳಿತು ರಿಮೋಟ್ ಕಂಟ್ರೋಲ್‍ನಿಂದ ಇಡೀ ಹೊಲಕ್ಕೆ ಕ್ರಿಮಿನಾಶಕ ಸಿಂಪಡಿಸಬಹುದಾಗಿದೆ. ಸುಮಾರು 8 ಲಕ್ಷ ರೂಪಾಯಿಯ ಈ ಡ್ರೋನ್‍ಗೆ 8 ಲೀಟರ್ ಸಾಮರ್ಥ್ಯದ ಕ್ಯಾನ್ ಅಳವಡಿಸಲಾಗಿದೆ. ಕೇಂದ್ರ ಸರ್ಕಾರದಿಂದ ಶೇಕಡಾ 90 ರಷ್ಟು ಸಬ್ಸಿಡಿ ನೀಡಲಾಗುತ್ತದೆ. ಆದ್ರೆ, ಪೊಲೀಸರ ಅನುಮತಿ ಕಡ್ಡಾಯವಾಗಿ ಪಡೆಯಲೇಬೇಕಿದೆ.
ಒಟ್ನಲ್ಲಿ, ಕೇಂದ್ರ ಸರ್ಕಾರ ಇಸ್ರೇಲ್ ಮಾದರಿಯ ಡ್ರೋನ್ ತಂತ್ರಜ್ಞಾನವನ್ನ ನಮ್ಮಲ್ಲೂ ಪರಿಚಯಿಸಿದೆ. ಆದ್ರೆ, ಈ ಹೊಸ ತಂತ್ರಜ್ಜಾನವನ್ನು ರೈತರು ಹೇಗೆ ಸ್ವಾಗತಿಸುತ್ತಾರೆ ಅನ್ನೋದನ್ನು ಕಾದು ನೋಡಬೇಕಿದೆ.