ಬೆಂಗಳೂರು: ಬಿಸಿಲು ನಾಡು ವಿಜಯಪುರದ ಕನಕದಾಸ ಬಡಾವಣೆಯಲ್ಲಿ ಹೈಟೆಕ್ ಈಜುಕೊಳ ನಿರ್ಮಾಣ ಮಾಡಲಾಗಿದೆ.ಕಳೆದ ತಿಂಗಳು ಏಪ್ರಿಲ್ 18 ರಂದು ಶಾಸಕ ಯತ್ನಾಳ್ ಅವರೇ ಈಜಾಡುವ ಮೂಲಕ ಈಜುಕೊಳ ಉದ್ಘಾಟನೆ ಮಾಡಿದರು. ಇದಾಗಿ ತಿಂಗಳು ಪೂರ್ಣವಾಗಿಲ್ಲ. ಈಗಲೇ ವಿವಾದ ಆರಂಭವಾಗಿದೆ. ಜೊತೆಗೆ ಮೂಲ ಸೌಕರ್ಯ ಇಲ್ಲ, ನಿಯಮಗಳನ್ನು ಗಾಳಿಗೆ ತೂರಲಾಗುತ್ತಿದೆ ಅನ್ನೋ ಆರೋಪ ಕೇಳಿ ಬಂದಿದೆ. ಒಳಾಂಗಣ ಈಜುಕೊಳದ ಶುಲ್ಕ ವಿಚಾರವಾಗಿ ಪರ ವಿರೋಧ ಚರ್ಚೆ ಶುರುವಾಗಿದೆ. ಸಾಮಾನ್ಯ ಜನರಿಗೆ ತಿಂಗಳಿಗೆ 1200 ರೂಪಾಯಿ ಪಾಸ್ ದರ ನಿಗದಿ ಮಾಡಲಾಗಿದೆ. ಅದೇ ಸರ್ಕಾರಿ ನೌಕರರಿಗೆ ಕೇವಲ 600 ರೂಪಾಯಿ ಮಾಡಲಾಗಿದೆ. ಇದು ಜನರ ಆಕ್ರೋಶಕ್ಕೆ ಕಾರಣವಾಗಿದೆ.
ಈವರೆಗೆ ಸುಮಾರು 800 ಜನ ಪಾಸ್ ಪಡೆದಿದ್ದಾರೆ. ಅಲ್ಲದೆ, ಗಂಟೆಗೆ 100 ರೂಪಾಯಿ ನೀಡಿ ಟಿಕೆಟ್ ಪಡೆದು ಸಹ ಜನ ಬರುತ್ತಾರೆ. ಅಂದಾಜು ಪ್ರತಿದಿನ 8 ರಿಂದ 10 ಸಾವಿರ ರೂಪಾಯಿ ಆದಾಯ ಬರುತ್ತದೆ. ಇಷ್ಟಾದರೂ ಮೂಲ ಸೌಲಭ್ಯಗಳು ಹಾಗೂ ಸ್ವಚ್ಚತೆ ಇಲ್ಲ ಅನ್ನೋ ಆರೋಪ ಕೇಳಿ ಬಂದಿದೆ. ಅಲ್ಲದೆ, ಕೆಲವರನ್ನು ಹಣ ಪಡೆಯದೆ ಬೇಕಾಬಿಟ್ಟಿ ಈಜುಗೊಳದೊಳಗೆ ಬಿಡುತ್ತಿದ್ದಾರೆ ಎನ್ನಲಾಗಿದೆ. ಆದರೆ ಅಧಿಕಾರಿಗಳು ಇದೆಲ್ಲವನ್ನೂ ಅಲ್ಲಗಳೆದಿದ್ದಾರೆ.
ಒಟ್ಟಿನಲ್ಲಿ,ಈ ಹೈಟೆಕ್ ಈಜುಕೊಳದಲ್ಲಿ ಅಧಿಕಾರಿಗಳು ದರ ಪರಿಷ್ಕರಣೆ ಜೊತೆಗೆ ನಿಯಮಪಾಲನೆ ಕಡ್ಡಾಯಗೊಳಿಸಬೇಕಿದೆ.