ಬೆಂಗಳೂರು : ಆರ್ ಎಸ್ ಎಸ್ ಸಮಾಜವನ್ನು ಒಡೆಯಲು ಹೊರಟಿದೆ ಎಂದು ಕಾಂಗ್ರೆಸ್ ಸಂಸದ ಡಿ.ಕೆ.ಸುರೇಶ್ ಕಿಡಿಕಾರಿದ್ದಾರೆ.
ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ಪಕ್ಷದ ನಾಯಕರ ಮನೆಗೆ ಆಗಾಗ ಬರ್ತಾ ಇರುತ್ತೇನೆ. ಕ್ಷೇತ್ರದ ಕೆಲ ಕಾರ್ಯಕ್ರಮಗಳಿಗೆ ಆಹ್ವಾನ ಮಾಡಬೇಕಿತ್ತು. ಸಿದ್ದರಾಮಯ್ಯ ಮಾಜಿ ಸಿಎಂ ಹಾಗೂ ಹಿರಿಯ ನಾಯಕರು ಹಾಗಾಗಿ ನಾನೇ ಬಂದು ಆಹ್ವಾನ ಮಾಡಿದ್ದೇನೆ ಎಂದರು.
ಇನ್ನು ಆರ್ ಎಸ್ ಎಸ್ ಸಂಸ್ಥಾಪಕ ಕೇಶವ ಬಲಿರಾಮ್ ಹೆಡಗೆವಾರ್ ಪಠ್ಯ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ಆರ್ ಎಸ್ ಎಸ್ ಸಮಾಜವನ್ನು ಒಡೆಯಲು ಹೊರಟಿದೆ. ದೇಶ ಬಹುಭಾಷೆ ಮೇಲೆ ನಿಂತಿದೆ. ಅಶಾಂತಿ ಮೂಡಿಸುವ ಕೆಲಸ ಬಿಜೆಪಿ ಮಾಡುತ್ತಿದೆ. ಆಚಾರ ವಿಚಾರ ದಿನನಿತ್ಯದ ಸಂಗತಿಗಳಲ್ಲೂ ಜನರನ್ನು ಭಯಭೀತ ಮಾಡಲು ಹೊರಟಿದ್ದಾರೆ ಎಂದರು.
ಪಿಎಸ್ಐ ಮಾತ್ರವಲ್ಲ ಯುನಿವರ್ಸಿಟಿಗಳಲ್ಲಿ ಜೆಇಇ ನೇಮಕಾತಿಯಲ್ಲೂ ಅಕ್ರಮ ಆಗಿದೆ. ಹಗರಣಗಳನ್ನು ಮುಚ್ಚಿ ಹಾಕುವುದಕ್ಕೆ ಸರ್ಕಾರ ಹೊರಟಿದೆ. ಯುವಕರ ಭವಿಷ್ಯ ಹಾಳು ಮಾಡುವ ಕೆಲಸ ಮಾಡ್ತಿದ್ದಾರೆ. ಹಗರಣಗಳಲ್ಲಿ ಮುಖ್ಯಮಂತ್ರಿಗಳೇ ಇದರಲ್ಲಿ ಪಾಲುದಾರರು. ಸಿಎಂಗೆ ಯುವಕರ ರಕ್ಷಣೆ ಜವಾಬ್ದಾರಿ ಇರಬೇಕು
ನ್ಯಾಯಸಮ್ಮತವಾದ ತನಿಖೆ ಮಾಡಲಿ ಎಂದು ಹೇಳಿದರು.
ಅಲ್ಲದೇ ನಮ್ಮ ಕಾಲದಲ್ಲಿ ಅಕ್ರಮ ಆಗಿದ್ದರೂ ತನಿಖೆ ಮಾಡಲಿ. ಆದರೆ, ಸರ್ಕಾರ ತನಿಖೆಯನ್ನೇ ಮಾಡ್ತಿಲ್ಲವಲ್ಲ ? ಓಎಮ್ಆರ್ ಶೀಟ್ ಇಡುವ ಕೀ ಬಂಚ್ ಯಾರದ್ದೋ ಮನೆಯಲ್ಲಿ ಸಿಗುತ್ತದೆ. ನೈತಿಕ ಹೊಣೆ ಹೊತ್ತು ಮುಖ್ಯಮಂತ್ರಿಗಳೇ ರಾಜೀನಾಮೆ ಕೊಡಬೇಕು. ಮಂತ್ರಿ ಮಂಡಲದ ಅನೇಕರು ಇದರಲ್ಲಿ ಪಾಲುದಾರರಿದ್ದಾರೆ ಎಂದು ಬಿಜೆಪಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.