ಬೆಂಗಳೂರು : ಇಂದಿನಿಂದ 4 ದಿನಗಳ ಕಾಲ ರಾಜ್ಯಾದ್ಯಂತ ವರುಣನ ಅಬ್ಬರವಿದ್ದು, ಮೇ 20ರವರೆಗೆ ರೆಡ್ ಅಲರ್ಟ್ ಘೋಷಣೆ ಮಾಡಲಾಗಿದೆ.
ರಾಜ್ಯದ ಒಳನಾಡು ಪ್ರದೇಶದಲ್ಲಿ ಮೇಲ್ಮೈ ಸುಳಿಗಾಳಿ ಉಂಟಾಗಿರುವುದರಿಂದ ಕರಾವಳಿ ಹಾಗೂ ದಕ್ಷಿಣ ಒಳನಾಡಿನ ಎಲ್ಲ ಜಿಲ್ಲೆಗಳಲ್ಲಿ ಮೇ 17ರಿಂದ 20ರವರೆಗೆ ಗುಡುಗು, ಸಿಡಿಲು ಸಹಿತ ಧಾರಾಕಾರ ಮಳೆಯಾಗುವ ಮುನ್ಸೂಚನೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಮೇಲ್ಮೈ ಸುಳಿಗಾಳಿಯು ಮಧ್ಯಪ್ರದೇಶದಿಂದ ಕರ್ನಾಟಕದ ಒಳನಾಡು ಮಾರ್ಗವಾಗಿ ತಮಿಳುನಾಡಿನತ್ತ ಚಲಿಸುತ್ತಿರುವ ಕಾರಣ ರಾಜ್ಯದ ಹಲವು ಜಿಲ್ಲೆಗಳಲ್ಲಿ ಮಳೆಯಾಗುತ್ತಿದೆ. ಗಾಳಿ ಬೀಸುವ ದಿಕ್ಕಿನ ಬದಲಾವಣೆ ಜತೆಗೆ ಲಕ್ಷದ್ವೀಪ ಭಾಗದಲ್ಲಿ ಮತ್ತೊಂದು ಸುಳಿಗಾಳಿ ಇರುವುದರಿಂದ ಕರಾವಳಿ ಜಿಲ್ಲೆಗಳಲ್ಲೂ ಇದೇ 21ರವರೆಗೆ ಮಳೆ ಮುಂದುವರಿಯಲಿದೆ. ಕರಾವಳಿ ಜಿಲ್ಲೆಗಳಲ್ಲಿ ಮೇ 18ಕ್ಕೆ ಭಾರಿ ಮಳೆಯಾಗುವ ಮುನ್ಸೂಚನೆ ಇರುವುದರಿಂದ ಒಂದು ದಿನ ‘ರೆಡ್ ಅಲರ್ಟ್’ ಘೋಷಿಸಲಾಗಿದೆ. ಕರಾವಳಿಯಲ್ಲಿ ಗಂಟೆಗೆ ಗರಿಷ್ಠ 50 ಕಿ.ಮೀ ವೇಗದಲ್ಲಿ ಗಾಳಿ ಬೀಸುತ್ತಿರುವುದರಿಂದ ಮೀನುಗಾರರು ಸಮುದ್ರಕ್ಕೆ ಇಳಿಯಬಾರದು ಎಂದೂ ಇಲಾಖೆ ಎಚ್ಚರಿಸಿದೆ.
ಅಸಾನಿ ಚಂಡಮಾರುತದ ಪರಿಣಾಮ ರಾಜ್ಯದ ಹಲವೆಡೆ ಕಳೆದ ವಾರದಿಂದ ಮಳೆ ಸುರಿಯಿತು. ಈಗ ಅದರ ಪ್ರಭಾವ ತಗ್ಗಿದೆ. ಮೇಲ್ಮೈ ಸುಳಿಗಾಳಿ ಹಾಗೂ ಹವಾಮಾನ ವೈಪರೀತ್ಯಗಳಿಂದ ಮಳೆ ಮುಂದುವರಿಯಲಿದೆ. ಸದ್ಯ ದಕ್ಷಿಣ ಅಂಡಮಾನ್ ಸಮುದ್ರ ಭಾಗದಲ್ಲಿ ಮುಂಗಾರು ಪ್ರವೇಶವಾಗಿದೆ. ರಾಜ್ಯಕ್ಕೆ ಮೇ ಅಂತ್ಯದೊಳಗೆ ಮುಂಗಾರು ಪ್ರವೇಶಿಸುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆಯ ಅಧಿಕಾರಿ ತಿಳಿಸಿದ್ದಾರೆ.
ಇನ್ನು ಕರ್ನಾಟಕ ಮಾತ್ರವಲ್ಲದೆ ತಮಿಳುನಾಡು, ಕೇರಳದಲ್ಲಿ ಕೂಡ ವ್ಯಾಪಕ ಮಳೆ ಸಾಧ್ಯತೆ ಇರುವುದರಿಂದ ಕರಾವಳಿ ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಘೋಷಣೆ ಮಾಡಲಾಗಿದೆ. ಅಲ್ಲದೇ ಮೇ ತಿಂಗಳಲ್ಲಿ ಮೊದಲ ಬಾರಿಗೆ ಕರ್ನಾಟಕದಲ್ಲಿ ರೆಡ್ ಅಲರ್ಟ್ ಘೋಷಣೆ ಮಾಡಿದ್ದಾರೆ.