ಬೆಂಗಳೂರು : ಪೂರ್ವ ಮುಂಗಾರು ಮತ್ತು ಅಕಾಲಿಕ ಮಳೆಗೆ ರಾಜ್ಯದಲ್ಲಿ ಡೆಂಗ್ಯೂ ಜ್ವರ ಹೆಚ್ಚಳವಾಗಿದ್ದು, ಕಳೆದ ನಾಲ್ಕು ವಾರದಲ್ಲಿ 350 ಮಂದಿಯಲ್ಲಿ ಡೆಂಗ್ಯೂ ದೃಢಪಟ್ಟಿದೆ.
ಅದರಲ್ಲೂ, ಉಡುಪಿಯಲ್ಲಿ ಒಂದೇ ತಿಂಗಳಲ್ಲಿ ಪ್ರಕರಣಗಳು ದುಪ್ಪಟ್ಟಾಗಿದ್ದು, ಮೈಸೂರು, ಬೆಂಗಳೂರು ಸೇರಿ ಎಂಟು ಜಿಲ್ಲೆಗಳಲ್ಲಿ ಡೆಂಘೀ ಕಾಟ ಹೆಚ್ಚಿದೆ. ಸಾಮಾನ್ಯವಾಗಿ ಪ್ರತಿವರ್ಷ ಮಳೆಗಾಲದಲ್ಲಿ ಹೆಚ್ಚಿನ ಕಡೆ ನೀರುನಿಂತು ಸೊಳ್ಳೆ ಹಾವಳಿಯಿಂದ ಡೆಂಘೀ ಜ್ವರ ಹೆಚ್ಚು ಕಾಣಿಸಿಕೊಳ್ಳುತ್ತದೆ.
ಆದರೆ, ಕಳೆದ ಎರಡು ವಾರದಿಂದ ರಾಜ್ಯದಲ್ಲಿ ಮುಂಗಾರು ಪೂರ್ವ ಮಳೆ ಮತ್ತು ಚಂಡಮಾರುಗಳ ಅಕಾಲಿಕದಿಂದ ಮಳೆ ಸುರಿಯುತ್ತಿರುವ ಪರಿಣಾಮ ಸೊಳ್ಳೆ ಉತ್ಪತ್ತಿ ಹೆಚ್ಚಳವಾಗಿದೆ. ಹೀಗಾಗಿಯೇ, ಡೆಂಘೀ ಜ್ವರ ದಿಢೀರ್ ಏರಿಕೆ ಕಂಡಿದೆ.
ಅವಧಿ ಪೂರ್ವದ ಮಳೆಯಿಂದ ಏಪ್ರಿಲ್, ಮೇನಲ್ಲಿಯೇ ಡೆಂಘೀ ಪ್ರಕರಣಗಳು ಏರಿಕೆಯಾಗಿವೆ. ಹೆಚ್ಚು ಪ್ರಕರಣಗಳಿರುವ ಕಡೆ ನಿಯಂತ್ರಣಕ್ಕೆ ಕಠಿಣ ಕ್ರಮಗಳಿಗೆ ಜಿಲ್ಲಾಡಳಿತಗಳು ಮುಂದಾಗಿವೆ. ಸಾರ್ವಜನಿಕರು ಕೂಡಾ ತಮ್ಮ ಮನೆ ಸುತ್ತಮುತ್ತ ಸ್ವಚ್ಛತೆ ಕಡೆ ಗಮನ ಹರಿಸಿ, ಸೊಳ್ಳೆಗಳು ಹೆಚ್ಚದಂತೆ ಮುನ್ನೆಚ್ಚರಿಕೆ ವಹಿಸಬೇಕು. ಮೇ.16ರಂದು ರಾಜ್ಯಾದ್ಯಂತ ಡೆಂಘೀ ಜಾಗೃತ ದಿನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಸರ್ಕಾರ ತಿಳಿಸಿದೆ.
ಅಷ್ಟೇ ಅಲ್ಲದೇ ಇಂದು ರಾಷ್ಟ್ರೀಯ ಡೆಂಗ್ಯೂ ದಿನಾಚರಣೆ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆ ಮತ್ತು ಬಿಬಿಎಂಪಿ ಯಿಂದ ಜನಜಾಗೃತಿ ಜಾಥಾ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಎಂಜಿ ರೋಡ್ ಗಾಂಧಿ ಪ್ರತಿಮೆಯಿಂದ ಬಿಬಿಎಂಪಿ ಮುಖ್ಯ ಕಚೇರಿಯವರೆಗೆ ಜಾಥಾ ನಡೆಯಲಿದೆ. ಇನ್ನು ಈ ಕಾರ್ಯಕ್ರಮಕ್ಕೆ ಆರೋಗ್ಯ ಸಚಿವ ಡಾ ಕೆ ಸುಧಾಕರ್ ಚಾಲನೆ ನೀಡಲಿದ್ದಾರೆ.