ಮೇ 15, 2022. ಭಾರತೀಯ ಬ್ಯಾಡ್ಮಿಂಟನ್ ತಂಡ ಇದು ಸುವರ್ಣಾಕ್ಷರಗಳಲ್ಲಿ ಬರೆದಿಡುವ ದಿನ. ಹೌದು, 1983ರ ಏಕದಿನ ವಿಶ್ವಕಪ್ ಗೆದ್ದ ದಿನ ಖುಷಿ ಹೇಗಿತ್ತೋ ಅದಕ್ಕಿಂತ ಖುಷಿ ಭಾರತೀಯರು ಪಡುವ ದಿನ. ಭಾರತ ಪುರುಷರ ಬ್ಯಾಡ್ಮಿಂಟನ್ ಟೀಂ ಇದೇ ಮೊದಲ ಬಾರಿಗೆ ಐತಿಹಾಸಿಕ ಥಾಮಸ್ ಕಪ್ ಟೂರ್ನಿಯಲ್ಲಿ ಭರ್ಜರಿ ಗೆಲುವು ಸಾಧಿಸಿದೆ.
ಇದು ಸುಮ್ಮನೆ ಸಾಧನೆ ಅಲ್ಲವೇ ಅಲ್ಲ. ಯಾಕಂದ್ರೆ, ಶೂನ್ಯದಲ್ಲೇ ಕಟ್ಟಿಹಾಕಿದ ಭಾರತ 3 ಪಾಯಿಂಟ್‌ಗಳಿಂದ ಸತತ 14 ಬಾರಿ ಚಾಂಪಿಯನ್ ಆಗಿದ್ದ ಇಂಡೋನೇಷ್ಯಾವನ್ನು ಮಣ್ಣು ಮುಕ್ಕಿಸಿದೆ. ವಿಶೇಷ ಅಂದ್ರೆ, 73 ವರ್ಷಗಳ ಇತಿಹಾಸ ಹೊಂದಿರುವ ಟೂರ್ನಿಯಲ್ಲಿ ಇದೇ ಮೊದಲ ಬಾರಿಗೆ ಟ್ರೋಫಿ ಜಯಿಸಿದ ಸಾಧನೆ ಮಾಡಿದೆ.
ಥಾಮಸ್ ಕಪ್ ಅಂದ್ರೆ ಇಂಡೋನೇಷ್ಯಾ ಅನ್ನೋ ಮಾತಿತ್ತು..ಆ ದೇಶದ ವಿರುದ್ಧ ಆಟ ಅಂದ್ರೆ, ಗೆಲುವು ಸುಲಭದ ಮಾತಲ್ಲ ಅನ್ನೋ ಕಾಲ ಈಗ ಮಾಯವಾಗಿದೆ. ಅದು 3-0 ಅಂತರದಲ್ಲಿ ಮಣಿಸೋದು ಅಂದ್ರೆ ಅಬ್ಬಬ್ಬಾ ಎನ್ನಿಸದೇ ಇರಲ್ಲ.
ಥಾಮಸ್ ಕಪ್ ಫೈನಲ್ನ ಮೊದಲ ಪುರುಷರ ಸಿಂಗಲ್ಸ್ನಲ್ಲಿ ಭಾರತದ ಲಕ್ಷ್ಯ ಸೇನ್ ಅವರು ಇಂಡೋನೇಷ್ಯಾದ ಆಂಥೋನಿ ಸಿನಿಸುಕಾ ಗಿಂಟಿಂಗ್ ಅವರನ್ನು 8-21, 21-17, 21-16 ರಿಂದ ಸೋಲಿಸಿ ಭಾರತಕ್ಕೆ 1-0 ಮುನ್ನಡೆ ನೀಡಿದರು. ಅದಾದ ಬಳಿಕ ನಡೆದ ಮೊದಲ ಡಬಲ್ಸ್ ಪಂದ್ಯದಲ್ಲಿ ಸಾತ್ವಿಕ್ಸಾಯಿರಾಜ್ ರಂಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ ಅವರು ಮೊಹಮ್ಮದ್ ಅಹ್ಸಾನ್ ಮತ್ತು ಕೆವಿನ್ ಸಂಜಯ ಸುಕಮುಲ್ಜೊ ಅವರನ್ನು 18-21, 23-21, 21-19 ರಿಂದ ಸೋಲಿಸಿ ಭಾರತಕ್ಕೆ 2-0 ಮುನ್ನಡೆ ನೀಡಿದರು.
ಭಾರತ ತಂಡ ಕೊನೆ ಮೂರು ಪಂದ್ಯಗಳ ಪೈಕಿ ಯಾವುದಾದರೂ ಒಂದನ್ನು ಗೆದ್ದಲ್ಲಿ ಚಾಂಪಿಯನ್ ಆಗುವ ಸುವರ್ಣ ಅವಕಾಶವನ್ನು ಹೊಂದಿತ್ತು. ಆದರೆ, ಕಿಡಂಬಿ ಶ್ರೀಕಾಂತ್ ಎರಡನೇ ಪುರುಷರ ಸಿಂಗಲ್ಸ್ ಪಂದ್ಯದಲ್ಲಿ ಜೊನಾಟನ್ ಕ್ರಿಸ್ಟಿ ಅವರನ್ನು 21-19, 23-21 ನೇರ ಸೆಟ್‌ಗಳಿಂದ ಸೋಲಿಸಿ ಭಾರತಕ್ಕೆ 3-0 ಮುನ್ನಡೆ ತಂದು ಟ್ರೋಫಿ ಎತ್ತಿ ಹಿಡಿದರು.
ಇನ್ನು, ಸಾಧನೆ ಮೆರೆದ ಭಾರತ ಪುರುಷರ ಬ್ಯಾಡ್ಮಿಂಟನ್ ತಂಡವನ್ನು ಪ್ರಧಾನಿ ಮೋದಿ ಟ್ವೀಟ್ ಮಾಡುವ ಮೂಲಕ ಅಭಿನಂದಿಸಿದ್ದಾರೆ. “ಭಾರತ ಬ್ಯಾಡ್ಮಿಂಟನ್ ತಂಡ ಇತಿಹಾಸ ಬರೆದಿದೆ! ಥಾಮಸ್ ಕಪ್ ಗೆದ್ದ ಭಾರತ ತಂಡದೊಂದಿಗೆ ಇಡೀ ದೇಶವೇ ಸಂಭ್ರಮಿಸಿದೆ! ನಮ್ಮ ನಿಪುಣ ತಂಡಕ್ಕೆ ಅಭಿನಂದನೆಗಳು ಮತ್ತು ಅವರ ಮುಂದಿನ ಪ್ರಯತ್ನಗಳಿಗಾಗಿ ಅವರಿಗೆ ಶುಭಾಶಯಗಳು. ಈ ಗೆಲುವು ಮುಂಬರುವ ಹಲವು ಕ್ರೀಡಾ ಪಟುಗಳಿಗೆ ಪ್ರೇರಣೆ ನೀಡಲಿದೆ’ ಎಂದು ಬರೆದಿದ್ದಾರೆ.
ಐತಿಹಾಸಿಕ ಸಾಧನೆ ಮಾಡಿದ ಭಾರತ ಬ್ಯಾಡ್ಮಿಂಟನ್ ತಂಡಕ್ಕೆ 1 ಕೋಟಿ ರೂಪಾಯಿ ನೀಡಲಾಗುವುದು ಎಂದು ಕೇಂದ್ರ ಕ್ರೀಡಾ ಸಚಿವ ಅನುರಾಗ್ ಠಾಕೂರ್ ಹೇಳಿದ್ದಾರೆ.
ಥಾಮಸ್ ಕಪ್ 2022 ಫೈನಲ್‌ನಲ್ಲಿ ಭಾರತೀಯ ಬ್ಯಾಡ್ಮಿಂಟನ್ ತಂಡವು 14 ಬಾರಿಯ ಚಾಂಪಿಯನ್ ಇಂಡೋನೇಷ್ಯಾವನ್ನು 3-0 ಅಂತರದಿಂದ ಸೋಲಿಸುವ ಮೂಲಕ ಇತಿಹಾಸವನ್ನು ಸೃಷ್ಟಿಸಿದೆ. ಭಾರತ ಇತಿಹಾಸ ನಿರ್ಮಿಸಿ ಚೊಚ್ಚಲ ಬಾರಿಗೆ ಥಾಮಸ್ ಕಪ್ ಪ್ರಶಸ್ತಿ ಗೆದ್ದುಕೊಂಡಿದ್ದು, ವಿಶ್ವ ಚಾಂಪಿಯನ್ ಪಟ್ಟಕ್ಕೇರಿವ ಮೂಲಕ ಭಾರತದ ಹೆಮ್ಮೆಯ ಗರಿ ಮೂಡುವಂತಾಗಿದೆ.