ಮೈಸೂರು: ರಾಜ್ಯಕ್ಕೆ ಗೃಹಸಚಿವ ಅಮಿತ್ ಶಾ ಬಂದು ಹೋದ್ಮೇಲೆ, ಹಳೆ ಮೈಸೂರು ಭಾಗದಲ್ಲಿ ಬಿಜೆಪಿ ಫುಲ್ ಆ್ಯಕ್ಟಿವ್ ಆಗಿದೆ. ರಾಜ್ಯ, ದೇಶದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದಿರೋ ಬಿಜೆಪಿ ಹಳೆ ಮೈಸೂರು ಪ್ರಾಂತ್ಯದಲ್ಲಿ ಕೇಸರಿ ಬಲ ಹೆಚ್ಚಿಸಿಕೊಳ್ಳಲು ಮುಂದಾಗಿದೆ. ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ. ಸೋಮಶೇಖರ್ ನೀಡಿರೋ ಹೇಳಿಕೆ ಆಪರೇಷನ್ ಕಮಲ್ ಫಿಕ್ಸ್ ಅನ್ನೋದನ್ನ ಸಾರಿ ಹೇಳುತ್ತಿದೆ.
ಜೆಡಿಎಸ್, ಕಾಂಗ್ರೆಸ್ ಪಕ್ಷಗಳಲ್ಲಿ ಅಂತರ ಕಾಯ್ದುಕೊಂಡಿರೋ ನಾಯಕರನ್ನ ಟಾರ್ಗೆಟ್ ಮಾಡಿರೋ ಬಿಜೆಪಿ ಅಂತಹ ಹಾಲಿ, ಮಾಜಿ ಶಾಸಕರು, ಪ್ರಭಾವಿ ಮುಖಂಡರನ್ನ ತನ್ನತ್ತ ಸೆಳೆಯಲು ಮುಂದಾಗಿದೆ. ಜೆಡಿಎಸ್ ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ.ಟಿ.ದೇವೇಗೌಡ , ಜಿಟಿಡಿ ಪುತ್ರ ಜಿ.ಡಿ.ಹರೀಶ್ ಗೌಡ, ಮಂಡ್ಯ ಜಿಲ್ಲೆ ಶಾಸಕರಾದ ಸಿ.ಎಸ್.ಪುಟ್ಟರಾಜು, ಅಂದಾನಿ, ಹಾಲಿ ಸಂಸದೆ ಸುಮಲತಾ ಅಂಬರೀಶ್ ಸೇರಿದಂತೆ ಹಲವು ಘಟಾನುಘಟಿ ನಾಯಕರುಗಳಿಗೆ ಗಾಳ ಹಾಕಿದೆ.
ಜಿಲ್ಲಾ ಉಸ್ತುವಾರಿ ಸಚಿವ ಎಸ್. ಟಿ.ಸೋಮಶೇಖರ್ ಮಾತನಾಡಿ, ಹಳೆ ಮೈಸೂರು ಭಾಗದಲ್ಲಿ ಆಪರೇಷನ್ ಕಮಲ ನಡೆಯುತ್ತಿದೆ. ಮಾತುಕತೆ ಅಂತಿಮ ಹಂತಕ್ಕೆ ತಲುಪಿದ್ದು, ಯಾವುದೇ ಕಂಡಿಷನ್ ಇಲ್ದೆ ಘಟಾನುಘಟಿ ನಾಯಕರು ಒಪ್ಪಿದ್ದು, ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟಿಲ್ ಗ್ರೀನ್ ಸಿಗ್ನಲ್ ಕೊಟ್ರೆ ಆದಷ್ಟು ಶೀಘ್ರದಲ್ಲೇ ಕೆಲ ನಾಯಕರು ಬಿಜೆಪಿ ಸೇರ್ತಾರೆ ಎಂದಿದ್ದಾರೆ.
ಪಕ್ಷಕಗಳ ಆಂತರಿಕ ಭಿನ್ನಾಭಿಪ್ರಾಯಗಳಿಂದ ಹಲವು ಹಂತಗಳಲ್ಲಿ ಕೆಲ ಜೆಡಿಎಸ್, ಕಾಂಗ್ರೆಸ್ ನಾಯಕರು ಅಂತರ ಕಾಯ್ದುಕೊಂಡಿದ್ದಾರೆ. ಜೆಡಿಎಸ್, ಕಾಂಗ್ರೆಸ್ ಪಕ್ಷದ ಆಂತರಿಕ ಒಳಜಗಳದ ಲಾಭ ಪಡೆದು ಆಪರೇಷನ್‌ಗೆ ಬಿಜೆಪಿ ಮುಂದಾಗಿದೆ ಎನ್ನಲಾಗ್ತಿದೆ. ಚಾಮರಾಜ ಕ್ಷೇತ್ರದ ಶಾಸಕ ಎಲ್.ನಾಗೇಂದ್ರ ಕೂಡ ಆಪರೇಷನ್ ಕಮಲ ಸತ್ಯ ಅನ್ನೋದನ್ನ ಒಪ್ಪಿಕೊಂಡಿದ್ದಾರೆ. ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ.ಟಿ. ದೇವೇಗೌಡ ಈಗಾಗಲೇ ಜೆಡಿಎಸ್ ಪಕ್ಷ ತೊರೆಯಲು ಸಜ್ಜಾಗಿದ್ದು, ತನಗೆ ಚಾಮುಂಡೇಶ್ವರಿ, ಪುತ್ರನಿಗೆ ಚಾಮರಾಜ ಕ್ಷೇತ್ರದಲ್ಲಿ ಟಿಕೇಟ್ ಕೊಡಿ ಅಂತಾ ಕೈ ನಾಯಕರಿಗೆ ತಮ್ಮ ಡಿಮ್ಯಾಂಡ್ ಇಟ್ಟಿದ್ದಾರೆ. ಆದ್ರೆ ಈ ವರೆಗೂ ಕಾಂಗ್ರೆಸ್ ಹೈಕಮಾಂಡ್ ಗ್ನೀನ್ ಸಿಗ್ನಲ್ ಕೊಟ್ಟಿಲ್ಲ. ಹೀಗಾಗಿ ಜಿ.ಟಿ. ದೇವೇಗೌಡಪುತ್ರಗೆ ಬಿಜೆಪಿ ಟಿಕೇಟ್ ನೀಡಿದ್ರೆ ತಾನು ಕ್ಷೇತ್ರ ತ್ಯಾಗ ಮಾಡಲು ಸಿದ್ಧ ಅಂತ ಜಿಟಿ ದೇವೇಗೌಡರನ್ನ ಪಕ್ಷಕ್ಕೆ ಸ್ವಾಗತ ಮಾಡಿದ್ದಾರೆ.
ಒಟ್ಟಿನಲ್ಲಿ ಚುನಾವಣೆಗೆ ಒಂದು ವರ್ಷ ಬಾಕಿ ಇರುವಾಗಲೇ ಬಿಜೆಪಿ ಆಪರೇಷನ್ ಶುರುಮಾಡಿದೆ. ಬಿಜೆಪಿ ನಾಯಕರ ಮೇಗಾ ಪ್ಲಾನ್ ಹಳೆ ಮೈಸೂರು ಪ್ರಾಂತ್ಯದಲ್ಲಿ ಯಾವ ರೀತಿ ವರ್ಕೌಟ್ ಆಗುತ್ತೆ ಕಾದು ನೋಡಬೇಕು.