ಬೆಂಗಳೂರು: ಸುಪ್ರೀಂ ಕೋರ್ಟ್ ಆದೇಶದನ್ವಯ ಬಿಬಿಎಂಪಿ ಚುನಾವಣೆಯನ್ನ ಶೀಘ್ರವೇ ನಡೆಸುವಂತೆ ಒತ್ತಾಯಿಸಿ ಕಾಂಗ್ರೆಸ್ ನಾಯಕರು ಇಂದು ರಾಜ್ಯ ಚುನಾವಣಾ ಆಯೋಗಕ್ಕೆ ಮನವಿ ಪತ್ರ ಸಲ್ಲಿಸಿದ್ರು. ಕೆಪಿಸಿಸಿ ಕಾರ್ಯಾಧ್ಯಕ್ಷ ಹಾಗೂ ಶಾಸಕ ರಾಮಲಿಂಗ ರೆಡ್ಡಿ ನೇತೃತ್ವದ ನಿಯೋಗ ಚುನಾವಣಾ ಆಯೋಗಕ್ಕೆ ಭೇಟಿ ನೀಡಿದ್ದು ರಾಮಲಿಂಗರೆಡ್ಡಿ ಅವರಿಗೆ, ಪರಿಷತ್ ಸದಸ್ಯ ಪಿ ಆರ್. ರಮೇಶ್, ಶಾಸಕ ರಿಜ್ವಾನ್ ಹರ್ಷದ್, ಬಿಬಿಎಂಪಿ ಮಾಜಿ ಮೇಯರ್ ಗಂಗಾಬಿಕೆ, ಪಾಲಿಕೆಯ ಮಾಜಿ ಆಡಳಿತ ಪಕ್ಷದ ನಾಯಕರಾದ ಅಬ್ದುಲ್ ವಾಜಿದ್, ಶಿವರಾಜ್, ಸತ್ಯನಾರಾಯಣ್ ಸೇರಿ ಹಲವರು ಸಾಥ್ ನೀಡಿದ್ರು. ರಾಜ್ಯ ಚುನಾವಣಾ ಆಯೋಗದ ಆಯುಕ್ತರಾದ ಬಸವರಾಜ್ ಗೆ ಮನವಿ ಪತ್ರ ಸಲ್ಲಿಸದ ಬಳಿಕ ಮಾತನಾಡಿದ ರಾಮಲಿಂಗ ರೆಡ್ಡಿ, ಬಿಬಿಎಂಪಿ ಚುನಾವಣೆ 20 ತಿಂಗಳ ಮೊದಲೇ ಮಾಡಬೇಕಿತ್ತು. 1 ವರ್ಷ 8 ತಿಂಗಳ ಕಾಲ ಚುನಾವಣೆ ಇಲ್ಲದೆ, ಆಡಳಿತಗಾರರನ್ನ ನೇಮಿಸಿ ಆಡಳಿತ ನಡೆಸ್ತಿದ್ದಾರೆ. ಆರಂಭದಲ್ಲಿ ಬೆಂಗಳೂರಿಗೆ ಪ್ರತ್ಯೇಕ ನಿಯಮ, ಆಕ್ಟ್ ತರುತ್ತೇವೆ, ಹೊಸ ಪ್ರದೇಶ ಸೇರ್ಪಡೆ ಮಾಡ್ತೇವೆ ಎಂದು ಸಮಿತಿಯನ್ನು ಮಾಡಿದರು. ಆದರೆ ತರಾತುರಿಯಲ್ಲಿ ವಿರೋಧ ಪಕ್ಷದ ಯಾವುದೇ ಸಲಹೆ ತಗೊಳದೆ ಪಾಲಿಕೆ ನಿಯಮಕ್ಕೆ ಅನುಮೋದನೆ ಪಡೆದುಕೊಂಡರು. ಇದೆಲ್ಲ ಆಗಿ ಒಂದು ವರ್ಷ ಆದರೂ ಪಾಲಿಕೆ ಚುನಾವಣೆ ಮಾಡಲು ಬಿಜೆಪಿ ಸಿದ್ಧವಿಲ್ಲ. ತಮಗೇ ಅಧಿಕಾರ ಬೇಕು, ಅಧಿಕಾರ ವಿಕೇಂದ್ರೀಕರಣ ಬಿಜೆಪಿಗೆ ಬೇಕಾಗಿಲ್ಲ. ಬಿಬಿಎಂಪಿಗೆ ಜನಪ್ರತಿನಿಧಿಗಳು ಬೇಕು. ಸರ್ಕಾರ ಆದಷ್ಟು ಬೇಗ ಚುನಾವಣೆ ನಡೆಸಿ ಜನರ ಸಮಸ್ಯೆ ಬಗೆಹರಿಸಬೇಕಿದೆ ಎಂದ್ರು.
ಬಿಬಿಎಂಪಿ ಚುನಾವಣೆ ಶೀಘ್ರದಲ್ಲಿ ನಡೆಸುವಂತೆ ಮನವಿ ಮಾಡಿದ ಕಾಂಗ್ರೆಸ್ ನಾಯಕರು ಒಬಿಸಿ ಮೀಸಲಾತಿಯನ್ನೂ ಕೊಡಬೇಕೆಂದು ಒತ್ತಾಯಿಸಿದ್ರು. ಸಿದ್ಧರಾಮಯ್ಯ ಸರ್ಕಾರ ಇದ್ದಾಗ ಕಾಂತರಾಜು ಸಮಿತಿಯು ಅಂಕಿಅಂಶ ಸಂಪೂರ್ಣವಾಗಿ ರಾಜ್ಯಸರ್ಕಾರಕ್ಕೆ ಸಲ್ಲಿಸಿದೆ. ಇದನ್ನು ತಗೊಂಡು ಹಿಂದುಳಿದ ವರ್ಗಕ್ಕೆ ಕೊಡಬೇಕಾದ ಮೀಸಲಾತಿಯನ್ನು ಕೊಡಬೇಕು ಎಂದು ಆಯೋಗಕ್ಕೆ ಮನವಿ ಮಾಡಿದ್ದು. ಎರಡು ವಾರಗಳ ಒಳಗಾಗಿ ನೋಟಿಫಿಕೇಷನ್ ಮಾಡಿ ಚುನಾವಣೆಯ ದಿನಾಂಕ ಘೋಷಣೆ ಮಾಡಬೇಕು. ಈ ಸಂಬಂಧ ಆಯೋಗ ಸಕಾರಾತ್ಮಕವಾಗಿ ಪ್ರತಿಕ್ರಿಯೆ ನೀಡಿದೆ. ಆದಷ್ಟು ಬೇಗ ಬಿಬಿಎಂಪಿ ಚುನಾವಣೆ ನಡೆಯಲಿದೆ ಎಂಬ ವಿಶ್ವಾಸ ಇದೆ ಎಂದ್ರು.
ಒಟ್ನಲ್ಲಿ ಬಿಬಿಎಂಪಿ ಚುನಾವಣೆಗೆ ಸುಪ್ರೀಂ ಕೋರ್ಟ್ ಅಸ್ತು ಅಂದಿದ್ರು ಹಲವು ಕಾರಣಗಳಿಂದ ಪಾಲಿಕೆ ಚುನಾವಣೆ ಸದ್ಯಕ್ಕೆ ನಡೆಯೋದು ಡೌಟ್ ಎಂಬ ಮಾತು ಕೇಳಿ ಬರ್ತಿದೆ. ಆದ್ರೆ ಚುನಾವಣೆ ಹೇಗೆ ನಡೆಸಬೇಕು ಅಂತ ಕಾಂಗ್ರೆಸ್ ಪ್ರಯತ್ನ ಪಡುತ್ತಿದ್ರೆ. ಚುನಾವಣೆ ಹೇಗೆ ತಪ್ಪಿಸಬೇಕು ಅಂತ ಬಿಜೆಪಿ ಪಯತ್ನಿಸುತ್ತಿದೆಯಂತೆ. ಹೀಗಿರುವಾಗ ಬಿಬಿಎಂಪಿ ಚುನಾವಣೆ ಸಂಬಂಧ ಸರ್ಕಾರ ಯಾವ ತೀರ್ಮಾನ ತೆಗೆದುಕೊಳ್ಳುತ್ತದೆ ಅಂತಾ ಕಾದು ನೋಡಬೇಕಿದೆ.