ಕಾರವಾರ : ಗಂಡು ನಾಯಿ ಮರಿಯೊಂದು ತನ್ನ ತಾಯಿಯನ್ನ ಕೊಂದ ವಾಹನದ ಮೇಲೆ ಸೇಡು ತೀರಿಸಿಕೊಳ್ಳಲು ಹವಣಿಸುತ್ತಿರುವ ಮನಕಲಕುವ ಘಟನೆಯೊಂದು ಅಂಕೋಲಾ ತಾಲೂಕಿನ ಹಟ್ಟಿಕೇರಿ ಟೋಲ್ ಗೇಟ್ ಬಳಿ ದಿನ ನಿತ್ಯ ನಡೆಯುವ ಘಟನೆಯಾಗಿದೆ.
ಸೈರನ್ ಹಾಕಿ ಬರುವ ಅಂಬ್ಯುಲೆನ್ಸ್, ಪೋಲಿಸ್ ವಾಹನಗಳೇ ಈ ನಾಯಿ ಮರಿಗೆ ಟಾರ್ಗೆಟ್ ಆಗಿದೆ. ಕಾರಣ ಒಂದು ವರ್ಷದ ಹಿಂದೆ ನಾಯಿ ತನ್ನ ಮರಿಗಳಿಗೆ ಹಾಲುಣಿಸುವಾಗ ಅಂಬ್ಯುಲೆನ್ಸ್‌ಗೆ ಸಿಕ್ಕಿ ಸಾವಿಗೀಡಾಗಿತ್ತು. ಅಪಘಾತದಲ್ಲಿ ಬದುಕುಳಿದಿದ್ದ ಗಂಡು ನಾಯಿ ಮರಿ ಈಗ ತಾಯಿಯ ಸಾವಿನ ಸೇಡು ತೀರಿಸಿಕೊಳ್ಳಲು ಕಳೆದ ಏಳೆಂಟು ತಿಂಗಳಿಂದ ನಾಯಿ ಕಾಯುತ್ತಿದೆ. ಇದಕ್ಕಾಗಿಯೇ ದಿನ ನಿತ್ಯ ಸೈರನ್ ಹಾಕಿ ಬರುವ ಎಲ್ಲಾ ಅಂಬ್ಯುಲೆನ್ಸ್ ವಾಹನಕ್ಕೂ ಅಡ್ಡಗಟ್ಟುತ್ತದೆ. ಅಷ್ಟೆ ಅಲ್ಲದೇ ಪೋಲಿಸ್ ವಾಹನಕ್ಕೂ ಅಡ್ಡಗಟ್ಟುವ ಪ್ರಯತ್ನ ಮಾಡುತ್ತದೆ.
ಇನ್ನು ಈ ಮರಿಯು ವಿಐಪಿ ಲೈನ್‌ನಲ್ಲಿ ಸೈರನ್ ಹಾಕಿ ಬರುವ ವಾಹನಗಳ ಮೇಲೆ ಮಾತ್ರ ಎರಗುತ್ತದೆ. ನಾಯಿ ಕೇವಲ ಟೋಲ್ ಸಿಬ್ಬಂದಿಯ ಜೊತೆ ಅನ್ಯೋನ್ಯವಾಗಿರುತ್ತದೆ. ತಾಯಿ ನಾಯಿ ಸಾವಿಗೀಡಾಗಿದ್ದರಿಂದ ಅನ್ನ ನೀರು ನೀಡಿ ಪೋಷಿಸಿರುವ ಟೋಲ್ ಸಿಬ್ಬಂದಿಯ ಮಾತಿಗೆ ತಲೆಬಾಗುತ್ತದೆ.
ಇನ್ನು ತಾಯಿಯ ಸಾವನ್ನ ಕಣ್ಣಾರೆ ಕಂಡ ಮರಿ ದಿನ ನಿತ್ಯವೂ ಅಂಬ್ಯುಲೆನ್ಸ್ ಬರುವ ಸಂದರ್ಭದಲ್ಲಿ ಅದರ ಹಿಂದೆ ಹೋಗಿ ವಾಹನಗಳ ಮೇಲೆ ಎರಗುವ ಘಟನೆ ನಡೆಯುತ್ತಿದೆ.