ಕಲಬುರಗಿ: ರಾಜ್ಯ ಸರ್ಕಾರಕ್ಕೆ ಕರುಣೆ ಇಲ್ಲ ಎಂದು ಶ್ರೀ ಶರಣಬಸವೇಶ್ವರ ಮಠದ ಪೀಠಾಧಿಪತಿ ಶ್ರೀ ಪ್ರಣವಾನಂದ ಸ್ವಾಮೀಜಿ ಅವರು ಹೇಳಿದರು.
ಆರ್ಯ ಈಡಿಗ ಸಮುದಾಯದ ಸಮಗ್ರ ಅಭಿವೃದ್ಧಿಗಾಗಿ ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿ ಹೋರಾಟ ಮಾಡುತ್ತಿರುವ ವೇಳೆ ಮಾತನಾಡಿದ ಅವರು, ಸರ್ಕಾರವು ಹಿಂದುಳಿದ ಸಮುದಾಯದ ಹೋರಾಟಗಳನ್ನ ಹತ್ತಿಕ್ಕುವ ಕೆಲಸ ಮಾಡುತ್ತಿದೆ ಎಂದು ರಾಜ್ಯ ಸರ್ಕಾರದ ವಿರುದ್ಧ ಆರೋಪಿಸಿದರು.
ಇನ್ನು ಬ್ರಹ್ಮಶ್ರೀನಾರಾಯಣ ಗುರುಗಳ ಹೆಸರಿನ ಮೇಲೆ ಪ್ರತ್ಯೇಕ ಅಭಿವೃದ್ಧಿ ನಿಗಮ, ಸಮಾಜದ ಕುಲ ಕಸುಬು ಸೇಂಧಿ ಮಾರಾಟಕ್ಕೆ ಅನುಮತಿ ನೀಡುತ್ತಿಲ್ಲ. ಗುಲ್ಬರ್ಗಾ ವಿವಿಯಲ್ಲಿ ಅಧ್ಯಯನ ಪೀಠ ಸ್ಥಾಪನೆ ಮಾಡಬೇಕು ಎಂದು ಶ್ರೀಗಳು ಆಗ್ರಹಿಸಿದರು.
ಹಿಂದುಳಿದ ವರ್ಗಕ್ಕೆ ಸಿಗ್ತಿರೋ ಯಾವುದೇ ಮೀಸಲಾತಿ ಸೌಲಭ್ಯಗಳು ನಮ್ಮ ಸಮುದಾಯಕ್ಕೆ ಸಿಗುತ್ತಿಲ್ಲ. ಸೇಡಂ, ಚಿತ್ತಾಪುರ, ಗುರುಮಠಕಲ್, ಯಾದಗಿರಿ ನಗರ ಸೇರಿದಂತೆ 17 ವಿಧಾನಸಭೆ ಕ್ಷೇತ್ರಗಳಲ್ಲಿ ನಮ್ಮ ಸಮುದಾಯದ ನಿರ್ಣಾಯಕ ಪಾತ್ರವಿದೆ. ಯಾರೇ ವಿಧಾನಸಭೆಗೆ ಹೋಗಬೇಕಾದರು ಈ ಕ್ಷೇತ್ರದಲ್ಲಿ ನಮ್ಮ ಸಮುದಾಯದ ಮತಗಳು ಬೇಕೆಬೇಕು ಎಂದರು.
ಅಷ್ಟೇಅಲ್ಲದೇ ಈಡಿಗ ಸಮಾಜಕ್ಕೆ ನ್ಯಾಯ ಸಿಗುವ ವರೆಗೆ ನಮ್ಮ ಹೋರಾಟ ನಿಲ್ಲದು. ಇದೇ ತಿಂಗಳು ಮೇ 20 ರೊಳಗೆ ಸರ್ಕಾರ ನಮ್ಮ ಬೇಡಿಕೆಗಳನ್ನ ಈಡೇರಿಸದಿದ್ದರೆ, ಮೇ21 ರಂದು ಕಲಬುರಗಿ ಜಿಲ್ಲಾಧಿಕಾರಿಗಳ ಕಚೇರಿ ಎದುರು ಉಪವಾಸ ಸತ್ಯಾಗ್ರಹ ಕೈಗೊಳ್ಳಲಾಗುವುದು ಹಾಗೂ ಕಲ್ಯಾಣ ಕರ್ನಾಟಕ ಭಾಗದ ಎಲ್ಲಾ ರಾಷ್ಟ್ರೀಯ ಹೆದ್ದಾರಿಗಳನ್ನ ಬಂದ್ ಮಾಡಿ ಪ್ರತಿಭಟನೆ ನಡೆಸಲಾಗುವುದು ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.