ಬೆಂಗಳೂರು : ನಾನು ಗೃಹ ಇಲಾಖೆಯಲ್ಲಿ ಈಗ ಎಕ್ಸ್ ಪರ್ಟ್ ಆಗಿದ್ದೇನೆ. ಹೀಗಾಗಿ ನನಗೆ ಈ ಖಾತೆ ಸಾಕು ಅನ್ನಿಸುತ್ತಾ ಇಲ್ಲ. ಆದರೆ, ಹೈಕಮಾಂಡ್ ತೀರ್ಮಾನಕ್ಕೆ ನಾನು ಬದ್ಧನಾಗಿರುತ್ತೇನೆ ಎಂದು ಗೃಹಸಚಿವ ಅರಗ ಜ್ಞಾನೇಂದ್ರ ಹೇಳಿದ್ದಾರೆ.
ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪೊಲೀಸ್ ನೇಮಕಾತಿ ಹಗರಣಕ್ಕೆ ಸಂಬಂಧಿಸಿದಂತೆ ಎಲ್ಲ ರೀತಿಯ ತನಿಖೆ ನಡೆಯುತ್ತಿದೆ. ಸಾಕ್ಷಿಯೊಂದಿಗೆ ಎಲ್ಲರನ್ನೂ ಹಿಡಿಯುತ್ತಿದ್ದಾರೆ. ಈಗಾಗಲೇ ಮೇನ್ ಕಿಂಗ್ ಪಿನ್ ಎಂಬುವವರನ್ನೇ ಹಿಡಿದಿದ್ದಾರೆ. ಪಕ್ಷ, ಪಂಗಡಕ್ಕಿಂತ ಯಾರೇ ತಪ್ಪು ಮಾಡಿದರೂ ಕಾನೂನಿನ ಪ್ರಕಾರ ಕ್ರಮ ಕೈಗೊಳ್ಳುತ್ತೇವೆ. ಉಡುಪಿಯ ಎಸ್.ಪಿ ನೇತೃತ್ವದಲ್ಲಿ ತಂಡ ರಚನೆ ಮಾಡಿದ್ದು ಸಂಪೂರ್ಣವಾಗಿ ತನಿಖೆ ನಡೆಯುತ್ತಿದೆ ಎಂಬ ಮಾಹಿತಿ ತಿಳಿಸಿದರು.
ಇನ್ನು ಆಜಾನ್ ಮತ್ತು ಸುಪ್ರಭಾತ ಧ್ವನಿವರ್ಧಕ ವಿವಾದ ವಿಚಾರಕ್ಕೆ ಪ್ರತಿಕ್ರಿಯಿಸಿ, ಈಗಾಗಲೇ ಸರ್ಕಾರ ಹೊಸ ಗೈಡ್ ಲೈನ್ಸ್ ಹೊರಡಿಸಿದ್ದಾರೆ. ಅದಕ್ಕೆ ಪುನಃ ಪ್ರಶ್ನೆ ಮಾಡಲು 15 ದಿನಗಳ ಕಾಲ ಅವಕಾಶವಿದೆ. ನಿಯಮವನ್ನು ಪ್ರಾಧಿಕಾರ ಹೇಳಿರೋ ಪ್ರಕಾರ ಮಾಡಲಾಗುತ್ತಿದೆ. ಅದನ್ನ ಸ್ಟ್ರಿಕ್ಟಾಗಿ ಫಾಲೋ ಮಾಡಲಾಗುತ್ತಿದೆ. ರಾತ್ರಿ 10 ಗಂಟೆಯಿಂದ ಬೆಳಗ್ಗೆ 6ರವರೆಗೂ ಮೈಕ್ ಬಳಸುವಂತಿಲ್ಲ. ಅನುಮತಿ ಇಲ್ಲದೇ ಮೈಕ್ ಉಪಯೋಗಿಸುವಂತಿಲ್ಲ. ಹಾಗೇನಾದ್ರೂ ಆದ್ರೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವ ಆರಗ ಜ್ಞಾನೇಂದ್ರ ಎಚ್ಚರಿಕೆ ನೀಡಿದರು.