Friday, November 22, 2024

ಮೇಳಕುಂದಿ ಮೊಬೈಲ್​ ಡ್ಯಾಂಗೆ ಎಸೆದಿದ್ಯಾಕೆ..? ಆ ಮೊಬೈಲ್​ನಲ್ಲಿದ್ಯಾ ದೊಡ್ಡವರ ಸೀಕ್ರೆಟ್..?

ಕಲಬುರಗಿ : ಪಿಎಸ್​ಐ ನೇಮಕಾತಿ ಅಕ್ರಮ ಇಡೀ ರಾಜ್ಯವನ್ನೇ ಬೆಚ್ಚಿ ಬೀಳಿಸಿದೆ. ಸಿಐಡಿ ಬಲೆಗೆ ಬಿದ್ದಿರೋ ಆರೋಪಿಗಳು ಒಂದೊಂದೇ ಸ್ಪೋಟಕ ಮಾಹಿತಿ ಹೊರಹಾಕುತ್ತಿದ್ದಾರೆ. ಅಕ್ರಮದ ಕಿಂಗ್‌ಪಿನ್ ನೀರಾವರಿ ಇಲಾಖೆ ಇಂಜಿನಿಯರ್ ಮಂಜುನಾಥ್ ಮೇಳಕುಂದಿ, ಅಕ್ರಮ ಹೊರಬರುತ್ತಿದ್ದಂತೆ ಸಾಕ್ಷಿ ನಾಶಪಡಿಸಲು ಮೇ 1 ರಂದು ತನ್ನ ಮೊಬೈಲ್‌ ಆಳಂದ ತಾಲೂಕಿನ ಆಮರ್ಜಾ ಡ್ಯಾಂನಲ್ಲಿ ಬಿಸಾಕಿದ್ದಾನೆ.. ಈ ಮಾಹಿತಿಯನ್ನ ವಿಚಾರಣೆ ವೇಳೆ ಬಾಯ್ಬಿಟ್ಟಿದ್ದು, ಮೊಬೈಲ್‌ಗಾಗಿ ಸಿಐಡಿ ಅಧಿಕಾರಿಗಳು ಮುಂದಾಗಿದ್ದಾರೆ.

ಪಿಎಸ್‌ಐ ಅಕ್ರಮದಲ್ಲಿ ದೊಡ್ಡ ದೊಡ್ಡವರು ಭಾಗಿಯಾಗಿರೋ ಶಂಕೆ ವ್ಯಕ್ತವಾಗ್ತಿದೆ.. ಹೀಗಾಗಿ ಮಂಜುನಾಥ್​ ಮೇಳಕುಂದಿ ಮೊಬೈಲ್​ಗಾಗಿ ಸಿಐಡಿ ಅಧಿಕಾರಿಗಳು ತೀವ್ರ ಹುಡುಕಾಟ ನಡೆಸ್ತಿದ್ದಾರೆ.. ಈಗಾಗಲೇ ನುರಿತ ಈಜು ತಜ್ಞರು 35 ಅಡಿ ಆಳದ ಡ್ಯಾಂನಲ್ಲಿ ಮೊಬೈಲ್‌ಗಾಗಿ ತಲಾಶ್ ನಡೆಸಿದ್ದಾರೆ. ಒಂದು ವೇಳೆ ಮೊಬೈಲ್ ಸಿಕ್ಕಿದ್ದೆ ಆಳದಲ್ಲಿ ಅಕ್ರಮದ ಮತ್ತಷ್ಟು ರೂವಾರಿಗಳು ಸಿಕ್ಕಿ ಬೀಳಲಿದ್ದಾರೆ.

ಇನ್ನು, ಕಿಂಗ್‌ಪಿನ್ ಮಂಜುನಾಥ್ ಮೇಳಕುಂದಿ, ಕಲಬುರಗಿ ನಗರದ ಜಯನಗರ ಬಡಾವಣೆಯಲ್ಲಿ ಮೂರು ಕೋಟಿ ರೂಪಾಯಿ ವೆಚ್ಚದಲ್ಲಿ ಭವ್ಯ ಬಂಗಲೆ ಕಟ್ಟಿಸುತ್ತಿದ್ದಾನೆ. ನಿರ್ಮಾಣ ಹಂತದ ಮನೆ ಖರೀದಿಸಿದ ಬಳಿಕ ಮೇಳಕುಂದಿಯ ಸಹೋದರನ ಪತ್ನಿ ಸಾವನ್ನಪ್ಪಿದ್ದರು. ನಂತರ PWD ಪರೀಕ್ಷೆಯಲ್ಲಿ ಅಕ್ರಮ ಎಸಗಿ ಬೆಂಗಳೂರಲ್ಲಿ ಮಂಜುನಾಥ್ ಜೈಲು ಪಾಲಾಗಿದ್ದ. ಜೈಲಿ‌ನಿಂದ ಹೊರಬರುತ್ತಿದ್ದಂತೆ ಪಿಎಸ್‌ಐ ಪರೀಕ್ಷೆಯಲ್ಲಿ ಅಕ್ರಮ ಎಸಗಿ ಇದೀಗ ಸಿಐಡಿ ಬಂಧನದಲ್ಲಿದ್ದಾನೆ. ಮನೆ ವಾಸ್ತು ದೋಷದಿಂದಾಗಿಯೇ ನನಗೆ ಇಷ್ಟೆಲ್ಲ ಕೆಟ್ಟದು ಆಗಿದೆ ಅಂತಾ ಸಿಐಡಿ ಮುಂದೆ ಮೇಳಕುಂದಿ ಹೇಳಿಕೊಂಡಿದ್ದಾ‌ನೆ.

ಇನ್ನೂ ಇಡೀ ಅಕ್ರಮದ ಕೇಂದ್ರ ಸ್ಥಾನವಾಗಿರೋ ಜ್ಞಾನಜ್ಯೋತಿ ಶಾಲೆಯ ಕಾರ್ಯದರ್ಶಿ ದಿವ್ಯಾ ಹಾಗರಗಿಯ 11 ದಿನಗಳ ಸಿಐಡಿ ಕಸ್ಟಡಿ ಅಂತ್ಯಗೊಂಡಿದೆ. ಹೀಗಾಗಿ ದಿವ್ಯಾ ಸಿಐಡಿ ಅಧಿಕಾರಿಗಳು ನ್ಯಾಯಾಲಯದ ಮುಂದೆ ಹಾಜರುಪಡಿಸಿ, ಪತಿ ರಾಜೇಶ್ ಇರೋ ಜೈಲಿಗೆ​ ಕಳುಹಿಸಲಾಗಿದೆ.

ಅದೆನೇ ಇರಲಿ, ಇಡೀ ಅಕ್ರಮದ ಕಿಂಗ್‌ಪಿನ್‌ ಮಂಜುನಾಥ್ ಮೇಳಕುಂದಿ ಮೊಬೈಲ್​ಗಾಗಿ ಸಿಐಡಿ ತಲಾಶ್​ ನಡೆಸ್ತಿದೆ. ಮೊಬೈಲ್​ ಸಿಕ್ಕ ನಂತರ ಅದರಲ್ಲಿನ ಡಾಟಾ ರಹಸ್ಯ ಸ್ಪೋಟಗೊಂಡರೇ ಇಡೀ ಪ್ರಕರಣಕ್ಕೆ ಮತ್ತಷ್ಟು ರೋಚಕ ತಿರುವು ಸಿಗುವ ಸಾಧ್ಯತೆಯಿದೆ.

RELATED ARTICLES

Related Articles

TRENDING ARTICLES