ಬೆಂಗಳೂರು : ಪಿ ಎಸ್ ಐ ಪರೀಕ್ಷೆ ಅಕ್ರಮದಿಂದ ಎಚ್ಚೆತ್ತ ಸರ್ಕಾರವು, ಶಿಕ್ಷಕರ ನೇಮಕಾತಿ ಪರೀಕ್ಷೆಗೆ ಟೆಕ್ನಾಲಜಿ ಬಳಸಿ ಪರೀಕ್ಷೆ ಅಕ್ರಮಕ್ಕೆ ಕಡಿವಾಣ ಹಾಕಲು ಶಿಕ್ಷಣ ಇಲಾಖೆ ತಯಾರಿ ನಡೆಸಿದೆ ಎಂದು ಶಿಕ್ಷಣ ಸಚಿವ ಬಿ ಸಿ ನಾಗೇಶ್ ಹೇಳಿದ್ದಾರೆ.
ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಿಎಸ್ಐ ಪರೀಕ್ಷೆ ಅಕ್ರಮದಿಂದ ಸರ್ಕಾರ ಇದೀಗ ಎಚ್ಚೆತ್ತುಕೊಂಡಿದೆ. ಈ ಕುರಿತು ಶಿಕ್ಷಣ ಇಲಾಖೆ ಪೊಲೀಸ್ ಇಲಾಖೆ ಜೊತೆ ಮಹತ್ವದ ಸಭೆಯಾಗಿದ್ದು, ಸಭೆಯಲ್ಲಿ ಶಿಕ್ಷಕರ ನೇಮಕಾತಿ ಪರೀಕ್ಷೆ ಅಕ್ರಮ ನಡೆಯದಂತೆ ರೂಪುರೇಷೆ ರೂಪಿಸಲಾಗಿದೆ.
ರಾಜ್ಯಾದ್ಯಂತ 15 ಸಾವಿರ ಶಿಕ್ಷಕರ ನೇಮಕಾತಿ ಪರೀಕ್ಷೆ ಮೇ 21, 22ರಂದು ನಡೆಯಲಿದ್ದು, ನೇಮಕಾತಿ ಪರೀಕ್ಷೆಗೆ ಮುಂಜಾಗ್ರತಾ ಸಿದ್ಧತೆ ಮಾಡಿಕೊಳ್ಳಲಾಗ್ತಿದೆ. ಪರೀಕ್ಷಾ ಮೇಲ್ವಿಚಾರಕರಿಗೆ ಹೊಸ ರೂಲ್ಸ್ ಜಾರಿ ಮಾಡಲು ಸಿದ್ಧತೆ ನಡೆಯುತ್ತಿದೆ. ಅಲ್ಲದೇ ಟೆಕ್ನಾಲಜಿ ಬಳಸಿ ಪರೀಕ್ಷೆ ಅಕ್ರಮಕ್ಕೆ ಕಡಿವಾಣ ಹಾಕಲು ಪ್ಲ್ಯಾನ್ ಮಾಡಿದೆ.
ಇನ್ನು ವಾಚ್ ಮೂಲಕ ಅಕ್ರಮ ಸಾಧ್ಯತೆ ಹೆಚ್ಚಳ ಹಿನ್ನೆಲೆ ಶಿಕ್ಷಕರ ನೇಮಕಾತಿ ಪರೀಕ್ಷೆಯಲ್ಲಿ ಯಾರು ವಾಚ್ ಕಟ್ಟುವಂತಿಲ್ಲ. ಪ್ರತಿ ಪರೀಕ್ಷಾ ಕೊಠಡಿಯಲ್ಲಿ ವಾಲ್ ಕ್ಲಾಕ್ ಹಾಕಲು ನಿರ್ಧಾರ ಮಾಡಲಾಗಿದೆ. ಅಲ್ಲದೇ, ಪರೀಕ್ಷಾ ಕೊಠಡಿಗೆ ಯಾರೊಬ್ಬರು ಬ್ಲೂಟೂತ್ ತರದಂತೆ ಎಚ್ಚರವಹಿಸಲಾಗಿದೆ.
ಪಿಎಸ್ ಐ, ಸಹಾಯಕ ಪ್ರಾಧ್ಯಾಪಕ ಪರೀಕ್ಷೆಯಲ್ಲಿ ಅಕ್ರಮ ಆರೋಪಗಳಿವೆ. ಈ ಕಾರಣಕ್ಕೆ ಶಿಕ್ಷಕರ ನೇಮಕಾತಿ ಪರೀಕ್ಷೆಯಲ್ಲಿ ಅಕ್ರಮವಾಗದಂತೆ ಎಚ್ಚರಿಕೆ ವಹಿಸಲಾಗುತ್ತಿದೆ. ತಜ್ಞರು, ಪೊಲೀಸ್ ಇಲಾಖೆ ನೀಡುವ ಸಲಹೆಗಳನ್ನು ಪಾಲನೆ ಮಾಡಲಾಗುತ್ತದೆ.