ಬೆಂಗಳೂರು: ಪಿಎಸ್‌ಐ ನೇಮಕಾತಿಯಲ್ಲಿ ಕೇವಲ ಲಿಖಿತ ಪರೀಕ್ಷೆಯಲ್ಲಷ್ಟೇ ಅಕ್ರಮ ನಡೆದಿಲ್ಲ. ಕೆಲ ಅಭ್ಯರ್ಥಿಗಳು ಸ್ಟಿರಾಯ್ಡ್ ಪಡೆದು ದೈಹಿಕ ಪರೀಕ್ಷೆಯಲ್ಲೂ ಉತ್ತೀರ್ಣರಾಗಿ ಗೋಲ್‌ಮಾಲ್ ನಡೆಸಿರುವ ಸುಳಿವು ಸಿಐಡಿ ತನಿಖಾ ತಂಡಕ್ಕೆ ಸಿಕ್ಕಿದೆ. ನೇಮಕಾತಿ ಅಕ್ರಮ ಹಗರಣದಲ್ಲಿ ಸಿಕ್ಕಿಬಿದ್ದಿರುವ ಕೆಲ ಅಭ್ಯರ್ಥಿಗಳು ‘ಸ್ಟಿರಾಯ್ಡ್’ ತೆಗೆದುಕೊಂಡು ದೈಹಿಕ ಪರೀಕ್ಷೆಗೆ ಹಾಜರಾಗಿ ಉತ್ತೀರ್ಣರಾಗಿದ್ದಾರೆ ಎನ್ನಲಾಗಿದೆ, ಇದಕ್ಕೆ ಕೆಲ ಪೊಲೀಸ್ ಅಧಿಕಾರಿ, ಸಿಬ್ಬಂದಿಗಳು ಸಹಕಾರ ನೀಡಿ ದ ಕುರಿತು ಮಾಹಿತಿಯನ್ನು ಸಿಐಡಿ ತನಿಖಾ ತಂಡ ಹೀಗಾಗಲೇ ಕಲೆ ಹಾಕಿದೆ.ಕೆಲ ಮಧ್ಯವರ್ತಿಗಳು 50 ರಿಂದ 80ಲಕ್ಷ ರೂ.ಗಳಿಗೆ ಡೀಲ್ ಕುದುರಿಸಿದ್ದಾರೆ.ಇದರಲ್ಲಿ ಕೆಲ ಅಭ್ಯರ್ಥಿಗಳು ದೈಹಿಕ ಹಾಗೂ ಲಿಖಿತ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು ಡೀಲ್ ಫಿಕ್ಸ್ ಮಾಡಿಕೊಂಡಿದ್ದಾರೆ. ಇದಕ್ಕೆ ಸಂಬಂಧಿಸಿದ ಪುರಾವೆಗಳನ್ನು ಸಂಗ್ರಹಿಸಲು ತನಿಖಾ ತಂಡ ಮುಂದಾಗಿದೆ.
CID ವಿಚಾರಣೆಗೆ ಹಾಜರಾಗಿದ್ದ 243 ಅಭ್ಯರ್ಥಿಗಳು ಒಎಂಆರ್‌ನ ನಕಲು ಪ್ರತಿ ತಪಾಸಣೆ ಮಾಡುವುದರೊಂದಿಗೆ ಅಭ್ಯರ್ಥಿಗಳನ್ನು ಹಲವು ರೀತಿ ವಿಚಾರಣೆ ಮಾಡಿದ್ದಾರೆ, ತನಿಖೆ ವೇಳೆ ಪಾರದರ್ಶಕವಾಗಿ ಆಯ್ಕೆಯಾಗಿರುವುದು ಖಚಿತಪಟ್ಟಿದೆ. ಹೀಗಾಗಿ, ಅವರ ನೇಮಕಾತಿ ಸಕ್ರಮ ಎಂದು ಸಿಐಡಿ ಅಭಿಪ್ರಾಯಪಟ್ಟಿದೆ ಎನ್ನಲಾಗಿದೆ, ಉಳಿದಂತೆ 94 ಅಭ್ಯರ್ಥಿಗಳ ಒಎಂಆರ್‌ನ ನಕಲು ಪ್ರತಿ ಸಲ್ಲಿಸಿದ ಕಾರಣ ಅವರ ಮೇಲೆ ತನಿಖಾ ತಂಡದ ಗುಮಾನಿ ಹೆಚ್ಚಾಗಿದೆ. ಅಲ್ಲದೆ ಈಗಾಗಲೇ ಅವರಿಗೆ ನೋಟಿಸ್ ಸಹ ಜಾರಿಗೊಳಿಸಿದ್ದು, ಒಎಂಆರ್ ಪ್ರತಿಯನ್ನು ಮಂದಿನ 2 ದಿನಗಳಲ್ಲಿ ಸಲ್ಲಿಸದಿದ್ದರೆ ಕಾನೂನು ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದೆ.
ಸಿಐಡಿ ಡಿಜಿ ಸಂಧು ಜೊತೆ ಪ್ರಕರಣದ ತನಿಖಾಧಿಕಾರಿಗಳು ಸಭೆ ನಡೆಸಿದ್ದಾರೆ, ಇದುವರೆಗಿನ ಪ್ರಕರಣದ ತನಿಖೆಯ ಬಗ್ಗೆ ಎಳೆ ಎಳೆಯಾಗಿ ಸಂಧು ಮಾಹಿತಿ ಪಡೆದಿದ್ದಾರೆ ಎನ್ನಲಾಗಿದೆ, ಎಂಟು ಡಿವೈಎಸ್ ಪಿಗಳ ನೇತೃತ್ವದಲ್ಲಿ ರಚಿಸಿರೋ ಎಸ್ ಐಟಿ ತಂಡದ ಕಾರ್ಯಾಚರಣೆ ಬಗ್ಗೆ ಸಲಹೆ ನೀಡಿ ಡಿವೈಎಸ್ ಪಿ ಯಶವಂತ್ ರಿಗೆ ಟೆಕ್ನಿಕಲ್ ಎವಿಡೆನ್ಸ್ ಕಲೆ ಹಾಕಲು ಟಾಸ್ಕ್ ನೀಡಿದ್ದಾರೆ ಎನ್ನಲಾಗಿದೆ.ಬೆಂಗಳೂರು ಮತ್ತು ಕಲ್ಬುರ್ಗಿ ಬಿಟ್ಟು ಬೇರೆ ಬೇರೆ ಜಿಲ್ಲೆಗಳಲ್ಲಿಯೂ ಈ ಅಕ್ರಮ ನಡೆದ ಅನುಮಾನ ಸದ್ಯ ಸಿಐಡಿ ಅಧಿಕಾರಿಗಳಿಗೆ ಇದೆ ಎನ್ನಲಾಗಿದೆ. ಸದ್ಯ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿರುವ ಪಿಎಸ್ಐ ಪರೀಕ್ಷೆ ಅಕ್ರಮ ಪ್ರಕರಣ ಎಲ್ಲಿಗೆ ಹೋಗಿ ನಿಲ್ಲುತ್ತದೋ ಕಾದು ನೋಡಬೇಕಿದೆ.