ವಿಜಯಪುರ : ರಾಜ್ಯದಲ್ಲಿ ಪಿ ಎಸ್ ಐ ಪರೀಕ್ಷೆಯಲ್ಲಿ ಅಕ್ರಮ ವಿಚಾರ ಹಿನ್ನೆಲೆ ಬಿಜೆಪಿ ನಾಯಕ ತಮ್ಮ ಆಡಳಿತ ಸರ್ಕಾರದ ವಿರುದ್ಧವೇ ಪ್ರಧಾನಿ ಕಚೇರಿಗೆ ದೂರು ನೀಡಿದ್ದಾರೆ.
ರಾಜ್ಯ ಸರ್ಕಾರ ಭ್ರಷ್ಟ ಸರ್ಕಾರವಾಗಿದ್ದು, ಪೊಲೀಸ್ ಇಲಾಖೆ ಅಲ್ಲದೆ ಬೇರೆ ಇಲಾಖೆಯಲ್ಲೂ ಅಕ್ರಮ ನಡೆದಿದೆ. ಹೀಗಾಗಿ ಸದಿಲ್ಲದೆ ಸರ್ಕಾರದ ವಿರುದ್ಧ ಪ್ರಧಾನಿ ಮೋದಿ ಕಚೇರಿಗೆ ದೂರು ತಲುಪಿದೆ. ಕಳೆದ ವಾರ ಈ ಪ್ರಕರಣದ ಆರೋಪಿ ದಿವ್ಯಾ ಅವರಿಗೆ ಮಾಜಿ ಸಿಎಂ ಬೆಂಬಲ ಇದೆ ಎಂದು ಶಾಸಕ ಯತ್ನಾಳ ಆರೋಪಿಸಿದ್ದರು. ಇದೀಗ ಪಿ ಎಸ್ ಐ ಪರೀಕ್ಷೆ ಪ್ರಕರಣವನ್ನು ಸಿಬಿಐಗೆ ವಹಿಸಲು ಯತ್ನಾಳ ಅವರ ಪರಮಾಪ್ತ ರಾಘವ್ ಅಣ್ಣಿಗೇರಿ ಅವರಿಂದ ಪ್ರಧಾನಿ ಕಚೇರಿಗೆ ಆನಲೈನ್ ಮೂಲಕ ದೂರು ನೀಡಿದ್ದಾರೆ.
ಅದುವಲ್ಲದೇ ಪರೋಕ್ಷವಾಗಿ ಈ ಪ್ರಕರಣದಲ್ಲಿ ಇನ್ನು ದೊಡ್ಡವರ ಕೈವಾಡ ಇದೆ. ರಾಜ್ಯದಲ್ಲಿ ಭ್ರಷ್ಟ ಸರ್ಕಾರವಿದ್ದು, ಇದರಿಂದ ನಾಡಿನ ಜನತೆ ರೋಸಿ ಹೋಗಿದ್ದಾರೆ. ಪೊಲೀಸ್ ಇಲಾಖೆ ಮಾತ್ರವಲ್ಲದೆ ಲೋಕೋಪಯೋಗಿ ಹಾಗೂ ನೀರಾವರಿ ಇಲಾಖೆಯಲ್ಲೂ ಭ್ರಷ್ಟಾಚಾರ ನಡೆದಿದೆ. ಈ ಬಗ್ಗೆ ಹಲವು ದೂರುಗಳು ಕೇಳಿ ಬಂದಿವೆ. ಹೀಗಾಗಿ ಇವುಗಳ ಬಗ್ಗೆಯೂ ತನಿಖೆ ಮಾಡಬೇಕು. ಸಿಐಡಿ ತನಿಖೆಯಿಂದ ಮಾತ್ರ ಪ್ರಮುಖ ಆರೋಪಿಯನ್ನು ಹಿಡಿಯಲು ಸಾಧ್ಯವಿಲ್ಲ, ಹೀಗಾಗಿ ಸಿಬಿಐಗೆ ನೀಡಿ ಎಂದು ಮನವಿ ಮಾಡಿಕೊಂಡಿದ್ದಾರೆ.
ಇನ್ನು ದಿವ್ಯಾ ಹಾಗರಗಿ ಬಂಧನದ ಬಳಿಕವೇ ಪ್ರಧಾನಿ ಕಚೇರಿಗೆ ದೂರು ನೀಡಿರುವುದು ಕೂತೂಹಲಕ್ಕೆ ಕಾರಣವಾಗಿದೆ ಮತ್ತು ಬಿಜೆಪಿ ಸರ್ಕಾರದ ವಿರುದ್ಧವೇ ಬಿಜೆಪಿ ಮುಖಂಡ ದೂರು ನೀಡಿರುವುದು ಪ್ರಕರಣ ತಿರುವಿಗೆ ಕಾರಣ ಆಗುವ ಸಾಧ್ಯತೆಯಿದೆ.