Friday, November 22, 2024

ಶಾಸಕರ ಬಾಟಲಿ ಹೊಡೆದಾಟ ಮುಚ್ಚಾಕೋಕೆ ‘ಕೈ’ ನಾಯಕರ ಸರ್ಕಸ್​..!

ರಾಮನಗರ ಜಿಲ್ಲೆ ಬಿಡದಿ ಬಳಿಯ ಈಗಲ್ಟನ್ ರೆಸಾರ್ಟ್​ನಲ್ಲಿ ವಿಜಯನಗರ ಶಾಸಕ ಆನಂದ್​ ಸಿಂಗ್ ಮತ್ತು ಕಂಪ್ಲಿ ಶಾಸಕ ಜೆ.ಎನ್ ಗಣೇಶ್ ನಡುವೆ ಗಲಾಟೆ ನಡೆದಿದ್ದು ಗೊತ್ತೇ ಇದೆ. ರೆಸಾರ್ಟ್​ ಒಳಗೆ ನಡೆದ ಜಗಳ ಕಾಂಗ್ರೆಸ್​ಗೆ ತೀವ್ರ ಮುಜುಗರ ತಂದಿಟ್ಟಿದ್ದೂ ಹೌದು. ರೆಸಾರ್ಟ್​​​ ಜಗಳದ ಕುರಿತು ಕಾಂಗ್ರೆಸ್​ ಮುಖಂಡರು ಒಬ್ಬೊಬ್ಬರು ಒಂದೊಂದು ರೀತಿಯಲ್ಲಿ ಹೇಳಿಕೆಗಳನ್ನ ಕೊಡ್ತಾ ಇರೋದು ಪಕ್ಷಕ್ಕೆ ಇನ್ನಷ್ಟು ಮುಜುಗರ ಉಂಟುಮಾಡಿದೆ. ಸಚಿವ ಡಿ ಕೆ ಶಿವಕುಮಾರ್​ ಅವರು ಶಾಸಕರ ನಡುವೆ ಯಾವುದೇ ಜಗಳವೇ ನಡೆದಿಲ್ಲ, ಮಾತಿನ ಚಕಮಕಿಯಷ್ಟೇ ನಡೆದಿರೋದು ಅಂದ್ರೆ, ಅವರ ಸಹೋದರ ಡಿ ಕೆ ಸುರೇಶ್​​ ಅವರು ಆನಂದ್​ ಸಿಂಗ್ ಎದೆ ನೋವಿನಿಂದ ಆಸ್ಪತ್ರೆಗೆ ದಾಖಲಾಗಿದ್ದಾರೆ ಅಂತಿದ್ದಾರೆ. ಇನ್ನು ಡಿಸಿಎಂ ಜಿ ಪರಮೇಶ್ವರ್​ ಅವರು ನಂಗೆ ವಿಷ್ಯಾನೇ ಗೊತ್ತಿಲ್ಲ, ತಿಳ್ಕೊಂಡು ಹೇಳ್ತೀನಿ ಅಂತಿದ್ದಾರೆ. ಅಂತೂ ನಡೆದಿರೋ ಜಗಳವನ್ನ ಇತ್ಯರ್ಥ ಮಾಡೋದಕ್ಕೂ ಕೈ ನಾಯಕರು ವಿಫಲರಾಗ್ತಿದ್ದಾರೆ ಅನ್ನೋದು ಅವರ ಹೇಳಿಕೆಗಳಿಂದಲೇ ಸ್ಪಷ್ಟವಾಗ್ತಿದೆ.

ರೆಸಾರ್ಟ್​ನಲ್ಲಿ ಹೊಡೆದಾಟದ ವೇಳೆ ಶಾಸಕ ಆನಂದ್​ ಸಿಂಗ್​ಗೆ ತೀವ್ರ ಏಟಾಗಿದ್ದು ಬೆಳಗ್ಗೆ 7 ಗಂಟೆ ಸುಮಾರಿಗೆ ಶೇಷಾದ್ರಿಪುರಂನ ಅಪೋಲೋ ಆಸ್ಪತ್ರೆಗೆ ದಾಖಲಿಸಲಾಗಿತ್ತು. ತಲೆ, ಹೊಟ್ಟೆ ಭಾಗಕ್ಕೆ ಪೆಟ್ಟಾಗಿದ್ದು, ಆನಂದ್​ ಸಿಂಗ್​ ಅವರ ತಲೆಗೆ ವೈದ್ಯರು ಸ್ಟಿಚ್​​ ಹಾಕಿದ್ದಾರೆ. ಅಪೋಲೋ ಆಸ್ಪತ್ರೆಯ ರೂಮ್​ ನಂಬರ್ 6002ರಲ್ಲಿ ಆನಂದ್ ಸಿಂಗ್​ ಚಿಕಿತ್ಸೆ ಪಡೀತಿದ್ದಾರೆ.

ಇಂದು ಬೆಳಗ್ಗೆ ಶಾಸಕರ ಜಗಳದ ಬಗ್ಗೆ ಏನೂ ನಡೆದೇ ಇಲ್ಲ ಎಂಬಂತೆ ಹೇಳಿಕೆ ನೀಡಿದ್ದರು ಡಿ. ಕೆ ಶಿವಕುಮಾರ್. ಶಾಸಕರ ಗಲಾಟೆ ಕುರಿತು ರಾಮನಗರದಲ್ಲಿ ಸ್ಪಷ್ಟನೆ ನೀಡಿ, “ಶಾಸಕರ ನಡುವೆ ಯಾವುದೇ ಮಾರಾಮಾರಿ ನಡೆದಿಲ್ಲ. ಶಾಸಕ ಆನಂದ್ ಸಿಂಗ್ ಜೊತೆ ಮಾತನಾಡಿದ್ದೇನೆ. ಶಾಸಕರಿಬ್ಬರ ನಡುವೆ ನಾನೇ ಸಂಧಾನ ನಡೆಸಿದ್ದೇನೆ. ಕೇವಲ ಮಾತಿನ ಚಕಮಕಿ ಅಷ್ಟೇ ನಡೆದಿದೆ” ಅಂತ ಹೇಳಿದ್ರು. ನಂತರ “ರೆಸಾರ್ಟ್​ನಲ್ಲಿ ಹಲ್ಲೆಯೇ ನಡೆದಿಲ್ಲ. ಆನಂದ್ ಸಿಂಗ್​ ಸಂಬಂಧಿಕರ ಮದ್ವೆಗೆ ಹೋಗಿದ್ದಾರೆ ಅಂದ್ರು. ಡಿ ಕೆ ಶಿವಕುಮಾರ್​ ಅವ್ರೇ ಘಟನೆ ಬಗ್ಗೆ ಎರಡೆರಡು ಹೇಳಿಕೆ ನೀಡಿ ಸಂಶಯಕ್ಕೆ ದಾರಿ ಮಾಡಿ ಕೊಟ್ರೆ ನಂತರದಲ್ಲಿ ಕೈ ಶಾಸಕರು ನೀಡಿರೋ ಹೇಳಿಕೆಗಳು ಒಂದಕ್ಕೊಂದು ಮ್ಯಾಚ್​ ಆಗ್ತಿಲ್ಲ.

ಆನಂದ್ ಸಿಂಗ್​ ಅವ್ರನ್ನು ನೋಡಲು ಅಪೊಲೊ ಆಸ್ಪತ್ರೆಗೆ ಬಂದ ಸಂಸದ ಡಿ ಕೆ ಸುರೇಶ್​ ಅವರು ಮಾಧ್ಯಮದವರೊಂದಿಗೆ ಮಾತನಾಡಿ, “ಶಾಸಕ ಆನಂದ್ ಸಿಂಗ್​ಗೆ ಎದೆನೋವು. ಈಗ ನಿದ್ರೆ ಮಾಡ್ತಿದ್ದಾರೆ. ಆರಾಮವಾಗಿದ್ದಾರೆ. ಅವರ ಮೇಲೆ ಯಾರೂ ಹಲ್ಲೆ ಮಾಡಿಲ್ಲ. ರೆಸಾರ್ಟ್​ನಲ್ಲಿ ಜಗಳ ನಡೆದೇ ಇಲ್ಲ” ಅಂತ ಹೇಳಿದ್ದಾರೆ.

ಪ್ರಕರಣದ ಬಗ್ಗೆ ಬೆಂಗಳೂರಲ್ಲಿ ಮಾಜಿ ಡಿಸಿಎಂ ಆರ್​.ಅಶೋಕ್ ಪ್ರತಿಕ್ರಿಯೆ ನೀಡಿದ್ದು ಕೈ ನಾಯಕರ ವಿರುದ್ಧ ಆಕ್ರೊಶ ವ್ಯಕ್ತ ಪಡಿಸಿದ್ರು. “ಹಲ್ಲೆಯಿಂದ ರಾಜ್ಯದ ಶಾಸಕರ ಮಾನ ಮರ್ಯಾದೆ ಹರಾಜಾಗಿದೆ. ಸುಮೋಟೊ ಕೇಸ್ ದಾಖಲಿಸಿಕೊಂಡು ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಿ. ಈ ಎಲ್ಲಾ ಘಟನೆಗಳಿಗೆ ಮಾಜಿ ಸಿಎಂ ಸಿದ್ದರಾಮಯ್ಯ ಅವ್ರೇ ಕಾರಣ. ಬಾರ್​​ನಲ್ಲಿ ಗೂಂಡಾಗಳು ಹೊಡೆದಾಡುವಂತೆ ರೆಸಾರ್ಟ್​ನಲ್ಲಿ ಬಡಿದಾಡಿಕೊಂಡಿದ್ದಾರೆ. ಆನಂದ್ ಸಿಂಗ್ ಹೊಟ್ಟೆ ಭಾಗ, ತಲೆಗೆ ಇರಿದಿದ್ದಾರೆ” ಅಂತ ಹೇಳಿದ್ದಾರೆ.

ಕೈ ನಾಯಕರು ಘಟನೆ ಮುಚ್ಚೋಕೆ ಏನೇನೋ ಕಾರಣ ಕೊಡ್ತಿದ್ರೆ ಡಿಸಿಎಂ ಜಿ ಪರಮೇಶ್ವರ್​ ಅವರು,” ಆನಂದ್ ಸಿಂಗ್ ಆಸ್ಪತ್ರೆಗೆ ದಾಖಲಾಗಿರುವ ಮಾಹಿತಿ ಇಲ್ಲ. ಹೊಡೆದಾಟ ನಡೆದಿರುವ ಬಗ್ಗೆಯೂ ಮಾಹಿತಿಯಿಲ್ಲ. ಶಾಸಕರನ್ನ ಭೇಟಿ ಮಾಡಲು ಹೋಗ್ತಾ ಇದ್ದೇನೆ. ಘಟನೆ ಬಗ್ಗೆ ಶಾಸಕರನ್ನ ವಿಚಾರಣೆ ಮಾಡ್ತೀನಿ. ಡಿಕೆ ಶಿವಕುಮಾರ್​​ ಅವರು ಫೋನ್ ಸಂಪರ್ಕಕ್ಕೆ ಸಿಕ್ಕಿಲ್ಲ” ಅಂತ ಈಗಲ್ಟನ್​ ರೆಸಾರ್ಟ್ ಬಳಿ ಹೇಳಿಕೆ ನೀಡಿದ್ದಾರೆ.

ಇಷ್ಟೆಲ್ಲ ಗೊಂದಲದ ನಂತರ ರೆಸಾರ್ಟ್​ ಗಲಾಟೆಯನ್ನು ಕಾಂಗ್ರೆಸ್ ಒಪ್ಪಿಕೊಂಡಿದೆ. ಗಲಾಟೆ ನಡೆದಿದ್ದು ನಿಜ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಅವ್ರೇ ಹೇಳಿದ್ದಾರೆ. ” ರಾತ್ರಿ ಏನೋ ಸ್ವಲ್ಪ ಗಲಾಟೆ ಆಗಿದೆ. ಶಾಸಕರಾದ ಗಣೇಶ್-ಆನಂದ್ ಸಿಂಗ್ ನಡುವೆ ಗಲಾಟೆ ಆಗಿದ್ಯಂತೆ. ಯಾರದು ತಪ್ಪು ಏನು ಎಂಬುದು ಅಲ್ಲಿಗೆ ಹೋದ ನಂತರವೇ ಗೊತ್ತಾಗಲಿದೆ” ಅಂತ ಕೊಪ್ಪಳ ಜಿಲ್ಲೆ ಗಂಗಾವತಿಯಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆ ನೀಡಿದ್ದಾರೆ.

ಸಿಕ್ಕಿದ್ದೇ ಚಾನ್ಸ್​ ಅನ್ನೋ ತರ ಗಲಾಟೆ ವಿಚಾರ ಬಿತ್ತರವಾಗ್ತಿದ್ದಂತೆ ಬಿಜೆಪಿ ಟ್ವೀಟ್ ಮಾಡಿದೆ. “ಶಾಸಕರ ಬಡಿದಾಟ ತಡೆಯುವಲ್ಲಿ ಕಾಂಗ್ರೆಸ್‌ ಫೇಲ್‌ ಆಗಿದೆ. ನಿಮ್ಮ ಶಾಸಕರಲ್ಲಿ ಒಗ್ಗಟ್ಟಿಲ್ಲ ಅನ್ನೋದು ಜಗಳದ ಮೂಲಕ ಸಾಬೀತಾಗಿದೆ. ಈಗ ನೀವು ಬಿಜೆಪಿಯತ್ತ ಬೊಟ್ಟು ಮಾಡುವ ಹಾಗಿಲ್ಲ. ರೆಸಾರ್ಟ್‌ನಲ್ಲಿ ಕಾಂಗ್ರೆಸ್‌ ತನ್ನ ಶಾಸಕರನ್ನೇ ಕೂಡಿ ಹಾಕಿದೆ. ಶಾಸಕ ಆನಂದ್‌ ಸಿಂಗ್‌ ಆರೋಗ್ಯ ಆದಷ್ಟು ಬೇಗ ಸುಧಾರಿಸಲಿ” ಅಂತ ಬಿಜೆಪಿ ಅಧಿಕೃತ ಟ್ವಿಟರ್​ ಎಕೌಂಟ್​ನಿಂದ ಟ್ವೀಟ್ ಮಾಡಲಾಗಿದೆ.

RELATED ARTICLES

Related Articles

TRENDING ARTICLES