ಮಂಗಳೂರು : ಕಾಂಗ್ರೆಸ್ ಸಾವಿನಲ್ಲೂ ರಾಜಕೀಯ ಮಾಡ್ತಾ ಇದೆ ಎಂದು ಮಂಗಳೂರಿನಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ಕುಮಾರ್ ಕಟೀಲ್ ವಿರೋಧ ಪಕ್ಷದ ನಾಯಕರ ವಿರುದ್ಧ ಕಿಡಿಕಾರಿದರು.
ಉಡುಪಿಯಲ್ಲಿ ಗುತ್ತಿಗೆದಾರ ಸಂತೋಷ್ ಆತ್ಮಹತ್ಯೆ ಪ್ರಕರಣ ಹಿನ್ನಲೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ತನಿಖೆ ಆಗ್ತಾ ಇದೆ, ಮೊದಲಿಗೆ ತನಿಖೆಗೆ ಒತ್ತಾಯ ಮಾಡ್ಡಿದ್ದೇ ಈಶ್ವರಪ್ಪನವರು, ತನಿಖೆಗೆ ಸಹಕರಿಸುವ ನೆಲೆಯಲ್ಲಿ ಯಾರಿಗೂ ಮುಜುಗರ ಆಗಬಾರದೆಂದು ರಾಜೀನಾಮೆ ನೀಡಿದ್ದಾರೆ ಎಂದರು.
ಇನ್ನು ಕಾಂಗ್ರೆಸ್ ಸಾವಿನಲ್ಲೂ ರಾಜಕೀಯ ಮಾಡ್ತಾ ಇದೆ, ವಿರೋಧ ಪಕ್ಷದ ಎಲ್ಲಾ ನಾಯಕರು ಜೈಲಲ್ಲಿ ಇರಬೇಕಿತ್ತು. ಕಾಂಗ್ರೆಸ್ನ ಒಂದು ನಾಯಕರೂ ಹೊರಗಿರಬಾರದು, ಎಲ್ಲರೂ ಜೈಲಿನಲ್ಲಿ ಇರಬೇಕಾದವರು. ಸಿದ್ದರಾಮಯ್ಯ ಸರ್ಕಾರ ಇದ್ದಾಗ ಗಣಪತಿ ವಿಡಿಯೋ ಡೆತ್ ನೋಟ್ ಮಾಡಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಆಗಿದೆ ಎಂದು ವಾಗ್ದಾಳಿ ನಡೆಸಿದರು.
ಸದ್ಯ ಸಂತೋಷ್ ಆತ್ಮಹತ್ಯೆಯ ಬಗ್ಗೆ ಎಲ್ಲೂ ಡೆತ್ ನೋಟ್ ಸಿಕ್ಕಿಲ್ಲ. ಕೇವಲ ವಾಟ್ಸಪ್‌ನಲ್ಲಿ ಹರಿದಾಡಿದ್ದು ಮಾತ್ರ ಸಿಕ್ಕಿರೋದು. ಯಾಕೆ ನೀವು ಜಾರ್ಜ್ ಅನ್ನು ಬಂಧನ ಮಾಡಿಲ್ಲ? ಸಿದ್ದರಾಮಯ್ಯ ಸರ್ಕಾರದಲ್ಲಿ 24 ಮಂದಿ ಕಾರ್ಯಕರ್ತರ ಹತ್ಯೆಯಾಗಿತ್ತು. ಆ ಘಟನೆಗಳಲ್ಲಿ ಸಿದ್ದರಾಮಯ್ಯ ಬಂಧಿಸಿದ್ದಾರ? ಹಗರಣವೊಂದರಲ್ಲಿ ಬೇಲ್ ಪಡೆದಿರುವ ಕಾಂಗ್ರೆಸ್ ಅಧ್ಯಕ್ಷರು ಕೂಡ ಜೈಲಿನಲ್ಲಿ ಇರಬೇಕಾಗಿತ್ತು. ಯುವ ಕಾಂಗ್ರೆಸ್ ಅಧ್ಯಕ್ಷ ನಲಪಾಡ್ ಮೇಲೆ ಹತ್ತು ಕೇಸ್ ಇದೆ, ಒಳಗೆ ಹಾಕಿ. ಅವರು ಜೈಲಿನ ಒಳಗಡೆ ಹೋರಾಟ ಮಾಡಬೇಕು. ಸಂತೋಷ್ ಸಾವಿನ ಹಿಂದೆ ಕಾಂಗ್ರೆಸ್ ಇದೆ. ತನಿಖೆ ನಡೆಯುತ್ತಿದೆ, ಸತ್ಯಾಸತ್ಯತೆ ಬಯಲಾಗುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.