ಬೆಂಗಳೂರು: ಹಿಂದುತ್ವ ಕಾಂಗ್ರೆಸ್ಗೆ ಹೊಸದಲ್ಲ, ನಾವೆಲ್ಲಾ ಹಿಂದೂಗಳೇ ತಾನೇ(?) ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರು ಮಂಗಳವಾರ ಹೇಳಿದ್ದಾರೆ.
ಈ ವಿಚಾರಕ್ಕೆ ಸಂಬಂಧಿಸಿದಂತೆ ಮಾಧ್ಯಮದ ಜೊತೆ ಮಾತನಾಡಿದ ಅವರು, ರಾಹುಲ್ ಗಾಂಧಿ ಸಂಸತ್ತಿನಲ್ಲಿ, ಜೈಪುರ ಸಮಾವೇಶದಲ್ಲಿ ಇದನ್ನೇ ತಾನೇ ಹೇಳಿದ್ದು. ಆದರೆ, ಧರ್ಮ ಜಾತಿಯ ಆಧಾರದ ಮೇಲೆ ಸಮಾಜವನ್ನು ಒಡೆಯುವುದು ಸರಿಯಲ್ಲ, ಇದನ್ನು ಜನ ನೋಡುತ್ತಿದ್ದಾರೆ ಎಂದರು.
ಇನ್ನು ಸಚಿವ ಕೆ.ಎಸ್ ಈಶ್ವರಪ್ಪ ಮೇಲಿನ ಕಮೀಷನ್ ರಾಜಕೀಯದ ವಿಷಯದ ಬಗ್ಗೆ ಮಾತನಾಡಿದ ಅವರು, ಪೂರ್ವಯೋಜಿತ ಸಂಚು ಅಂತಾ ಹೇಳಿದ್ದು ನೋಡಿದ್ರೆ ಆಶ್ಚರ್ಯವಾಗುತ್ತೆ. ನನ್ನ ವಿರುದ್ದ ಯಾರಾದ್ರೂ ದೂರುಕೊಟ್ಟಿದ್ರಾ(?) ಯಾವುದಾದ್ರೂ ತನಿಖಾ ಸಮಿತಿಮಾಡಿ ವರದಿ ತೆಗೆದುಕೊಂಡಿದ್ರಾ(?) ಹಾಗಾದ್ರೆ ನನ್ನ ಮೇಲೆ ಯಾಕೆ ದಾಳಿ ಮಾಡಿ ಜೈಲಿಗೆ ಕಳುಹಿಸಿದ್ರು(?) ಮೇಲಾಗಿ ಕಮೀಷನ್ ರಾಜಕೀಯದ ಬಗ್ಗೆ ನಾವು ಹೇಳಿದ್ದಲ್ಲವಲ್ಲ, ಯತ್ನಾಳ್, ವಿಶ್ವನಾಥ್ ತಾನೇ ಮೊದಲು ಆರೋಪ ಮಾಡಿದ್ದು. ಅವರಿಗೆ ಹಾಗಾದ್ರೆ ಬುದ್ದಿ ಇಲ್ವಾ(?) ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರು ಮಾತನಾಡಿದರು.