ಬೆಂಗಳೂರು: ಸದನದಲ್ಲಿ ಮೊನ್ನೆ ನಡೆದ ಪಾವಗಡ ಬಸ್ ದುರಂತದ ಬಗ್ಗೆ ಕಾಂಗ್ರೆಸ್‌ನ ಯು.ಟಿ.ಖಾದರ್ ಪ್ರಸ್ತಾಪಿಸಿದ್ರು. ಶೂನ್ಯವೇಳೆಯಲ್ಲಿ ಮಾತನಾಡಿದ ಖಾದರ್, ಸಾರಿಗೆ ಬಸ್ ಇಲ್ಲವಾದ್ದರಿಂದ ಇಂತಹ ದುರಂತ ನಡೆದಿದೆ. ಸಾವು, ನೋವು ಗಾಯಗಳಾದವರ ಸಂಖ್ಯೆ ಹೆಚ್ಚಿದೆ. ಸ್ಥಳಕ್ಕೆ ಭೇಟಿ ನೀಡಿ ಧೈರ್ಯ ತುಂಬಬೇಕಾದ ಸಿಎಂ ಸಾಹೇಬ್ರು ಚಿಕ್ಕಬಳ್ಳಾಪುರದಲ್ಲಿ ತೆಲುಗಿನ RRR ಸಿನಿಮಾ ಪ್ರೋಗ್ರಾಂಗೆ ಹೋಗ್ತಾರೆ. ಇಂದೆಂತಹ ದೌರ್ಭಾಗ್ಯ ಅಂತ ಲೇವಡಿ ಮಾಡಿದ್ರು. ಸತ್ತವರಿಗೆ 25 ಲಕ್ಷ ರೂಪಾಯಿ, ಗಂಭೀರವಾಗಿ ಗಾಯಗೊಂಡವರಿಗೆ 10 ಲಕ್ಷ ಪರಿಹಾರಕ್ಕೆ ಒತ್ತಾಯಿಸಿದ್ರು.
ಈ ವೇಳೆ ಎದ್ದು ನಿಂತ ಸಾರಿಗೆ ಸಚಿವ ಶ್ರೀರಾಮುಲು ಸಿಎಂ ಬೊಮ್ಮಾಯಿ ಅವರನ್ನು ಸಮರ್ಥನೆಗೆ ಮುಂದಾದ್ರು. ಸಿಎಂ ಯಾದಗಿರಿಗೆ ಹೋದ ಕಾರಣ ನನಗೆ ಪಾವಗಡಕ್ಕೆ ತೆರಳುವಂತೆ ಹೇಳಿದ್ರು. ಅದಕ್ಕೆ ನಾನು ಘಟನಾ ಸ್ಥಳಕ್ಕೆ ಭೇಟಿ ಕೊಟ್ಟಿದ್ದೇನೆ. ಘಟನೆಯ ಬಗ್ಗೆ ತನಿಖೆಗೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಸರ್ಕಾರದ 5 ಲಕ್ಷದ ಜೊತೆಗೆ ನಾನೂ ವೈಯುಕ್ತಿಕವಾಗಿ 1 ಲಕ್ಷ ರೂಪಾಯಿ ಪರಿಹಾರವನ್ನು ಮೃತರ ಕುಟುಂಬಕ್ಕೆ ನೀಡಿದ್ದೇನೆ. ಘಟನೆಗೆ ಓವರ್ ಲೋಡ್ ಹಾಗೂ ಅತಿವೇಗವೇ ಕಾರಣ ಅಂತ ವಿವರಿಸಿದ್ರು. ಸಚಿವರ ಉತ್ತರಕ್ಕೆ ರಮೇಶ್ ಕುಮಾರ್ ಆಕ್ಷೇಪ ವ್ಯಕ್ತಪಡಿಸಿದ್ರು.
ಪ್ರಶ್ನೋತ್ತರ ವೇಳೆ ಕೆಜಿಎಫ್ ಶಾಸಕಿ ರೂಪಾ ಶಶಿಧರ್, ಕ್ಷೇತ್ರದ ವಸತಿ ವ್ಯವಸ್ಥೆ ಬಗ್ಗೆ ಗಮನಸೆಳೆದ್ರು. ನನ್ನ ಕ್ಷೇತ್ರದಲ್ಲಿ ಸಾಕಷ್ಟು ಕೊಳಚೆ ಪ್ರದೇಶಗಳಿವೆ. ಬಡವರಿಗೆ ಒಂದು ನಿವೇಶನ ಹಂಚೋಕೆ ಆಗ್ತಿಲ್ಲ. ಶೌಚಾಲಯ ವ್ಯವಸ್ಥೆ ಇಲ್ಲ, ಕೋವಿಡ್ ವೇಳೆ ಕಾರ್ಮಿಕರು ಕೆಲಸ ಕಳೆದುಕೊಂಡ್ರು. ಅಂತವರಿಗೆ ಮನೆಗಳನ್ನ ಕೊಡಿ ಅಂತ ಸರ್ಕಾರವನ್ನ ಒತ್ತಾಯಿಸಿದ್ರು. ನಾಗಮಂಗಲ ಸ್ಲಂಗೂ ಮನೆಗಳನ್ನ ಕೊಟ್ಟಿಲ್ಲ ಅಂತ ಶಾಸಕ ಸುರೇಶ್ ಗೌಡ ಆಕ್ರೋಶ ಹೊರಹಾಕಿದ್ರು. ಈ ವೇಳೆ ಉತ್ತರಿಸಿದ ವಸತಿ ಸಚಿವ ವಿ.ಸೋಮಣ್ಣ ಶೀಘ್ರವೇ ಪರಿಶೀಲನೆ ನಡೆಸಿ ಕ್ರಮಕೈಗೊಳ್ಳುವುದಾಗಿ ಭರವಸೆ ನೀಡಿದ್ರು.
ಮಧ್ಯಾಹ್ನ ಭೋಜನದ ಬಳಿಕ ಕಲಾಪ ಪುನರಾರಂಭವಾಗ್ತಿದ್ದಂತೆ ಸದನದಲ್ಲಿ ಖಾಲಿ ಖಾಲಿ ಇತ್ತು. ಇದನ್ನ ಗಮನಿಸಿದ ಯು.ಟಿ.ಖಾದರ್ ಕೇವಲ ಇಬ್ರೇ ಸಚಿವರಿದ್ದಾರೆ. ನಾವ್ಯಾಕೆ ಸದನ ನಡೆಸ್ಬೇಕು ಅಂತ ಆಕ್ರೋಶ ಹೊರಹಾಕಿದ್ರು. ಈ ವೇಳೆ ಸಚಿವ ಆರ್.ಆಶೋಕ್ ವಿರೋಧ ಪಕ್ಷದವ್ರು ಬಂದು ಕಿವಿ ಹಿಂಡಬೇಕು. ಆದ್ರೆ, ಕಿವಿ ಹಿಂಡುವ ಕೈಗಳೇ ಇಲ್ವಲ್ಲಾ ಅಂತ ಕಾಕೆಳೆದ್ರು.
ಚರ್ಚೆ ವೇಳೆ ಬಿಜೆಪಿಯ ಅರವಿಂದ ಬೆಲ್ಲದ್ ಅನ್ನಭಾಗ್ಯ ಯೋಜನೆ ಬಗ್ಗೆ ಪ್ರಸ್ತಾಪಿಸಿದ್ರು. ಸಿದ್ದರಾಮಯ್ಯ ನಾವು ತಂದಿದ್ದೆಂದು ಹೇಳ್ತಾರೆ. ಆದ್ರೆ, ಇದಕ್ಕೆ ಕೇಂದ್ರ ಸರ್ಕಾರದ ಅಕ್ಕಿ ಕೊಡುತ್ತೆ ಅಂತ ಹೇಳುವ ಮೂಲಕ ಯೋಜನೆ ನಮ್ಮದು ಎಂದ್ರು. ಈಗ 5 ಕೆಜಿ ಅಕ್ಕಿ ಕೊಡ್ತಿದ್ದಾರೆ. ಎರಡು ಕೆಜಿ ಕಟ್ ಮಾಡಿರೋ ಬಗ್ಗೆ ಗಮನ ಸೆಳೆಯಿರಿ ಅಂತ ಬೆಲ್ಲದ್‌ಗೆ ಸಿದ್ದರಾಮಯ್ಯ ಸಲಹೆ ಕೊಟ್ರು. ಒಟ್ಟಿನಲ್ಲಿ ಇವತ್ತಿನ ಸದನದಲ್ಲಿ ಯಾವುದೇ ಸದ್ದುಗದ್ದಲ ಇಲ್ಲದೆ ಅರ್ಥಪೂರ್ಣ ಚರ್ಚೆಗಳು ನಡೆದ್ವು. ಬಹುತೇಕ ಸದಸ್ಯರು ಮಾತನಾಡಲು ಸಮಯ ಸಾಕಾಗುತ್ತಿಲ್ಲ ಅಂತ ತಮ್ಮ ಅಸಮಾಧಾನವನ್ನು ಹೋರಹಾಕಿದ್ರು.