ಬೆಂಗಳೂರು: ಕನ್ನಡ ಚಿತ್ರರಂಗದ ಖ್ಯಾತ ನಿರ್ದೇಶಕ, ನಟನಾಗಿ ಗುರುತಿಸಿಕೊಂಡಿರುವ ಎಸ್ ನಾರಾಯಣ್ ರಾಜಕೀಯಕ್ಕೆ ಧುಮುಕಿದ್ದಾರೆ. ಇಂದು ಅವರು ಅಧಿಕೃತವಾಗಿ ಕಾಂಗ್ರೆಸ್ ಪಕ್ಷ ಸೇರಿದ್ದಾರೆ.
ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಸಮ್ಮುಖದಲ್ಲಿ ಎಸ್ ನಾರಾಯಣ್ ಅಧಿಕೃತವಾಗಿ ಕಾಂಗ್ರೆಸ್ ಪಕ್ಷಕ್ಕೆ ಸೇರಿಕೊಂಡಿದ್ದಾರೆ. ಇದೇ ವೇಳೆ ರಾಜ್ಯ ಶಿಕ್ಷಕರ ಸಂಘದ ಅಧ್ಯಕ್ಣ ತಿಮ್ಮಯ್ಯ ಪುರ್ಲೆ ಸೇರಿದಂತೆ ಹಲವು ಮುಖಂಡರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ ಆಗಿದ್ದಾರೆ.
ಪಕ್ಷ ಸೇರ್ಪಡೆ ಬಳಿಕ ಎಸ್ ನಾರಾಯಣ ಮಾತನಾಡಿ ಕಳೆದ ಮೂರು ದಶಕದಲ್ಲಿ ಚಿತ್ರರಂಗದ ಹಲವು ವಿಭಾಗದಲ್ಲಿ ಕೆಲಸ ಮಾಡಿದ್ದೇನೆ ಹಾಗೂ ಡಾ.ರಾಜ್, ವಿಷ್ಣುವರ್ಧನ್ ಸೇರಿ ಹಲವು ನಟರ ಜೊತೆ ಕೂಡ ಕೆಲಸ ಮಾಡಿದ್ದೇನೆ. ಚಿತ್ರರಂಗ ನನಗೆ ಎಲ್ಲವೂ ಕೊಟ್ಟಿದೆ ಹೀಗಾಗಿ ಎಲ್ಲರಿಗೂ ಧನ್ಯವಾದಗಳು. ಈ ಮಣ್ಣಿನಲ್ಲಿ ಹುಟ್ಟಿದ ಪ್ರತಿಯೊಬ್ಬರು ಕಾಂಗ್ರೆಸ್ಗೆ ಋಣಿಯಾಗಿರಬೇಕು, ಬಡವರಿಗೆ ನಾವಿದ್ದೀವಿ ಅಂತ ಹೇಳುವ ಪಕ್ಷ ಕಾಂಗ್ರೆಸ್ ಮಾತ್ರ.
ಜಾತ್ಯಾತೀತ ಸಿದ್ದಾಂತಗಳು ಇಷ್ಟ ಆಯ್ತು. ಹಾಗಾಗಿ ನಾನು ಕಾಂಗ್ರೆಸ್ ಸೇರಿದೆ. ನಮ್ಮೆಲ್ಲರ ಗುರಿ 2023 ಕ್ಕೆ ಕಾಂಗ್ರೆಸ್ ಅಧಿಕಾರಕ್ಕೆ ತರಬೇಕು. ಪಕ್ಷಕ್ಕಾಗಿ ದುಡಿಯುತ್ತೇನೆ, ಕೊಟ್ಟ ಮಾತಿನಂತೆ ಕೆಲಸ ಮಾಡುತ್ತೇನೆ ಎಂದು ನಾರಾಯಣ್ ಹೇಳಿದ್ದಾರೆ.