ನವದೆಹಲಿ: ಸೋನಿಯಾ ಗಾಂಧಿ ಅವರು ಕಾಂಗ್ರೆಸ್ ಅಧ್ಯಕ್ಷರಾಗಿ ಮುಂದುವರಿಯಲಿದ್ದಾರೆ. 5 ರಾಜ್ಯಗಳಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ಹೀನಾಯ ಸೋಲು ಕಂಡರೆ ನಾಯಕತ್ವ ಬದಲಾವಣೆಯಾಗಲಿದೆ ಎಂದು ಹೇಳಲಾಗಿತ್ತು. ಆದರೆ ಸುಮಾರು 4 ಗಂಟೆಗಳ ಕಾಲ ನಡೆದ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಸೋನಿಯಾ ಅವರೇ ಅಧ್ಯಕ್ಷರಾಗಿ ಮುಂದುವರಿಯಲು ನಿರ್ಧಾರ ಕೈಗೊಂಡಿದ್ದಾರೆ.
ಸೋನಿಯಾ ಗಾಂಧಿ ಅವರ ಜತೆ ಪಕ್ಷದ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ, ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ, ಕೆಸಿ ವೇಣುಗೋಪಾಲ್, ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ, ಲೋಕಸಭೆಯಲ್ಲಿ ಪಕ್ಷದ ನಾಯಕ ಅಧೀರ್ ರಂಜನ್ ಚೌಧರಿ ಮತ್ತು ಪಿ ಚಿದಂಬರಂ ಸಿಡಬ್ಲ್ಯೂಸಿ ಸಭೆಯಲ್ಲಿ ಭಾಗವಹಿಸಿದ್ದರು. 23 ನಾಯಕರ ಗುಂಪಿನಿಂದ ಗುಲಾಂ ನಬಿ ಆಜಾದ್, ಆನಂದ್ ಶರ್ಮಾ ಮತ್ತು ಮುಕುಲ್ ವಾಸ್ನಿಕ್ ಮಾತ್ರ ಈ ಸಭೆಯಲ್ಲಿ ಭಾಗವಹಿಸಿದ್ದರು. ಆದ್ರೆ, ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಸಭೆಗೆ ಹಾಜರಾಗಿರಲಿಲ್ಲ. ಇನ್ನು, ಪಕ್ಷದ ಹಿರಿಯ ನಾಯಕ ಎ ಕೆ ಆ್ಯಂಟನಿ ಅವರು ಕೊವಿಡ್ ಪಾಸಿಟಿವ್ ಆಗಿದ್ದರಿಂದ ಸಭೆಗೆ ಹಾಜರಿರಲಿಲ್ಲ.