ಕರ್ನಾಟಕ ವಿಧಾನ ಮಂಡಲದ ಬಜೆಟ್ ಅಧಿವೇಶನದಲ್ಲಿ ಚರ್ಚೆಯನ್ನು ಆರಂಭಿಸಿದ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ, ಚರ್ಚೆಯ ಆರಂಭದಲ್ಲಿಯೇ ರಾಜ್ಯ ಸರ್ಕಾರದ ಕಾರ್ಯವೈಖರಿ ಮತ್ತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಟೀಕಿಸಿದ್ದಾರೆ.
ಈ ವೇಳೆ ಮಧ್ಯಪ್ರವೇಶಿಸಿದ ಸ್ಪೀಕರ್, ‘ಬೊಮ್ಮಾಯಿ ಅವರನ್ನು ನಿಮ್ಮ ಫ್ರೆಂಡ್ ಎಂದು ಹೇಳುತ್ತಾ, ಏಕೆ ಹೀಗೆಲ್ಲಾ ಟೀಕಿಸುತ್ತಿದ್ದೀರಿ’ ಎಂದು ಪ್ರಶ್ನಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ‘ಸ್ನೇಹ ಬೇರೆ, ರಾಜಕಾರಣ ಬೇರೆ, ಸಿದ್ಧಾಂತ ಬೇರೆ. ನೀವು ಆರ್ಎಸ್ಎಸ್ ನಿಂದ ಬಂದವರು, ನಿಮ್ಮ ವೈಚಾರಿಕ ಸಿದ್ದಾಂತ ಬೇರೆ, ನಮ್ಮ ಸಿದ್ದಾಂತ ಬೇರೆ. ಹೊರಗೆ ಸ್ನೇಹ ಇದ್ದೇ ಇರುತ್ತದೆ, ಇಲ್ಲಿ ರಾಜಕಾರಣ ಇದ್ದೇ ಇರುತ್ತದೆ’ ಎಂದು ಸ್ಪಷ್ಟಪಡಿಸಿದರು. ಇದು ಡಬಲ್ ಎಂಜಿನ್ ಸರ್ಕಾರ ಎಂದು ಬಿಜೆಪಿಯವರು ಹೇಳುತ್ತಾರೆ. ರಾಜ್ಯ ಮತ್ತು ಕೇಂದ್ರದಲ್ಲಿ ಒಂದೇ ಪಕ್ಷದ ಸರ್ಕಾರ ಇದ್ದರೆ ಸ್ವರ್ಗವೇ ನಿರ್ಮಾಣ ಆಗುತ್ತದೆ ಎಂದು ಇವರು ಹೇಳುತ್ತಿದ್ದರು.
ಎಂಜಿನ್ ಕೆಟ್ಟಿರುವುದರಿಂದ ಇದು ಡಬ್ಬಾ ಸರ್ಕಾರ ಆಗಿದೆ ಎಂದು ಸಿದ್ದರಾಮಯ್ಯ ಟೀಕಿಸಿದರು. ಸಿದ್ದರಾಮಯ್ಯ ಮಾತನಾಡುತ್ತಿದ್ದಾಗ ಸದನದಿಂದ ತೆರಳಲು ಸಚಿವರಾದ ಆರ್.ಅಶೋಕ್, ಮುನಿರತ್ನ ಮುಂದಾದರು. ಈ ವೇಳೆ ‘ಹೇ ಮುನಿರತ್ನ, ಅಶೋಕ್ ಕುಳಿತುಕೊಳ್ಳಿ’ ಎಂದು ಸಿದ್ದರಾಮಯ್ಯ ಕೂಗಿ ಹೇಳಿದರು. ‘ನೀರು ಕುಡಿಯಲು ಹೋಗ್ತಿದ್ದೇನೆ’ ಎಂದು ಅಶೋಕ್ ಪ್ರತಿಕ್ರಿಯಿಸಿದಾಗ, ‘ಇಲ್ಲಿಗೇ ನೀರು ಕೊಡ್ತಾರೆ ಕುಳಿತುಕೊಳ್ಳಪ್ಪಾ’ ಎಂದು ಸಿದ್ದರಾಮಯ್ಯ ಪ್ರತಿಕ್ರಿಯಿಸಿದರು.