ಬೆಂಗಳೂರು : ರಾಜ್ಯದ ಜ್ವಲಂತ ಸಮಸ್ಯೆಗಳ ಚರ್ಚೆಗೆ ವೇದಿಕೆಯಾಗಬೇಕಿದ್ದ ವಿಧಾನಸಭೆ ಕಲಾಪ ವ್ಯರ್ಥ ಕಾಲಾಹರಣಕ್ಕೆ ಬಲಿಯಾಗುತ್ತಿದೆ. ಸರ್ಕಾರದ ಕಾರ್ಯವೈಖರಿಯಲ್ಲಿ ಲೋಪವಿದ್ದರೆ ತರಾಟೆಗೆ ತೆಗೆದುಕೊಳ್ಳಬೇಕಿದ್ದ ಪ್ರತಿಪಕ್ಷ ಕಾಂಗ್ರೆಸ್ ಸಣ್ಣ ವಿಚಾರಕ್ಕೆ ಸದನದಲ್ಲಿ ಕೋಲಾಹಲವೆಬ್ಬಿಸಿದೆ. ಅಷ್ಟು ಸಾಲದೆಂಬಂತೆ ಸದನದಲ್ಲೇ ಅಹೋರಾತ್ರಿ ಧರಣಿ ನಡೆಸಲು ತೀರ್ಮಾನಿಸಿದೆ.
ರಾಷ್ಟ್ರ ಧ್ವಜ ಹಾಗೂ ಭಗವಾಧ್ವಜ ಕುರಿತು ಸಚಿವ ಕೆಎಸ್ ಈಶ್ವರಪ್ಪ ನೀಡಿರುವ ಹೇಳಿಕೆ ಭಾರಿ ವಿವಾದ ಸೃಷ್ಟಿ ಮಾಡಿದೆ. ಸದನದಲ್ಲೂ ಇದು ಸದ್ದು ಮಾಡಿತ್ತು. ಈಶ್ವರಪ್ಪ ಮತ್ತು ಡಿ ಕೆ ಶಿವಕುಮರ್ ನಡುವೆ ಮಾತಿನ ಚಕಮಕಿಗೂ ಕಾರಣವಾಗಿತ್ತು. ಈಶ್ವರಪ್ಪ ವಿರುದ್ಧ ಈಗ ಇಡೀ ರಾಜ್ಯದಲ್ಲಿ ಪ್ರತಿಭಟನೆ ಜೋರಾಗಿ ನಡೆಯುತ್ತಿದೆ. ಕಾಂಗ್ರೆಸ್ ಕಾರ್ಯಕರ್ತರು ರಾಜ್ಯದ ಬಹುತೇಕ ಕಡೆ ಪ್ರತಿಭಟನೆ ನಡೆಸಿದ್ದಾರೆ.
ಕೆಂಪುಕೋಟೆಯಲ್ಲಿ ಕೇಸರಿ ಧ್ವಜ ಹಾರಿಸುತ್ತೇವೆ ಎಂದು ಹೇಳಿಕೆ ನೀಡಿರುವ ಸಚಿವ ಕೆ.ಎಸ್. ಈಶ್ವರಪ್ಪ ರಾಜೀನಾಮೆಗೆ ಒತ್ತಾಯಿಸಿ ವಿಧಾನಸಭೆಯ ಕಾಂಗ್ರೆಸ್ ಸದಸ್ಯರು ಅಹೋರಾತ್ರಿ ಧರಣಿ ನಡೆಸಿದ್ದಾರೆ. ನಾವು ವಿಧಾನಸಭೆಯಲ್ಲಿ ಅಹೋರಾತ್ರಿ ಪ್ರತಿಭಟನೆ ನಡೆಸಲು ನಿರ್ಧರಿಸಿದ್ದೇವೆ. ಈ ವಿಚಾರಕ್ಕೆ ತಾತ್ವಿಕ ಅಂತ್ಯ ನೀಡಲು ನಿರ್ಧರಿಸಿದ್ದೇವೆ. ಹಗಲು ಮತ್ತು ರಾತ್ರಿ ನಾವು ಪ್ರತಿಭಟನೆ ನಡೆಸುತ್ತೇವೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಗರಂ ಆಗಿದ್ದಾರೆ.
ನಮ್ಮ ದೇಶದ ಹೆಮ್ಮೆ ಮತ್ತು ಸಾರ್ವಭೌಮತ್ವದ ಪ್ರತೀಕವಾದ ರಾಷ್ಟ್ರಧ್ವಜಕ್ಕೆ ಅಗೌರವ ತೋರುವ ಮೂಲಕ ಈಶ್ವರಪ್ಪ ದೇಶದ್ರೋಹ ಎಸಗಿದ್ದಾರೆ ಎಂದು ಕೈ ನಾಯಕರು ಕಿಡಿ ಕಾರಿದ್ರು.. ಕಾಂಗ್ರೆಸ್‌ನ ವಿಧಾನಪರಿಷತ್ ಸದಸ್ಯರು ಸಹ ಅಹೋರಾತ್ರಿ ಪ್ರತಿಭಟನೆ ನಡೆಸುತ್ತಿದ್ದಾರೆ. ‘ಆರ್‌ಎಸ್‌ಎಸ್‌ನ ಗುಪ್ತ ಅಜೆಂಡಾವನ್ನು ಈಶ್ವರಪ್ಪ ಮೂಲಕ ಹೊರಹಾಕಲಾಗಿದೆ. ರಾಷ್ಟ್ರಧ್ವಜ ನಮ್ಮ ಸ್ವಾತಂತ್ರ್ಯದ ಸಂಕೇತ. ತ್ರಿವರ್ಣ ಧ್ವಜದ ಮೂಲಕ ಸ್ವಾತಂತ್ರ್ಯ ಹೋರಾಟಗಾರರು ಧೈರ್ಯ ಮತ್ತು ಸ್ಫೂರ್ತಿ ಪಡೆಯುತ್ತಿದ್ದರು. ರಾಷ್ಟ್ರಧ್ವಜಕ್ಕೆ ಅಪಮಾನ ತಡೆಯಲು ಧ್ವಜಸಂಹಿತೆ ಇದೆ ಕೈ ನಾಯಕರು ಆಕ್ರೋಶ ಹೊರ ಹಾಕಿದ್ದಾರೆ.
ಇನ್ನೂ ಕಾಂಗ್ರೆಸ್ ಶಾಸಕರ ಅಹೋರಾತ್ರಿ ಧರಣಿಗೆ ಸ್ಪೀಕರ್ ಕಚೇರಿ ವಿಧಾನ ಸೌಧಕ್ಕೆ ಹಾಸಿಗೆ ಮತ್ತು ದಿಂಬು ತರಿಸಿದ್ರು. ಸ್ವತಃ ಸ್ಪೀಕರ್ ಕಾಗೇರಿ ಆಗಮಿಸಿ ಶಾಸಕರ ಅಹೋರಾತ್ರಿ ಧರಣಿ ಕೈಬಿಡುವಂತೆ ಮನವಿ ಮಾಡಿದ್ರು. ಬಳಿಕ ಯಡಿಯೂರಪ್ಪ ಮತ್ತು ಕಂದಾಯ ಸಚಿವ ಆಗಮಿಸಿ ಸೌಲಭ್ಯಗಳ ಬಗ್ಗೆ ವಿಚಾರಿಸಿ ವಾಪಸು ಆದ್ರು.
ಇತ್ತ, ಈಶ್ವರಪ್ಪ ಹೇಳಿಕೆಯನ್ನು ಸಿಎಂ ಬಸವರಾಜ ಬೊಮ್ಮಾಯಿ ಸಮರ್ಥನೆ ಮಾಡಿಕೊಂಡಿದ್ದಾರೆ.
ಒಟ್ಟಾರೆ ರಾಜ್ಯದ ಜ್ವಲಂತ ಸಮಸ್ಯೆಗಳ ಬಗ್ಗೆ ಚರ್ಚೆ ಮಾಡಬೇಕಿದ್ದ ಸದನದಲ್ಲಿ ಈಶ್ವರಪ್ಪ ರಾಜೀನಾಮೆಗೆ ಒತ್ತಾಯಿಸಿ ಕಾಂಗ್ರೆಸ್ ಅಹೋರಾತ್ರಿ ಧರಣಿಗೆ ಮುಂದಾಗಿ ಕಾಲಹರಣ ಮಾಡ್ತಿದ್ರೆ, ಇತ್ತ ಸರ್ಕಾರದ ಸದನವನ್ನ ಅನಿರ್ದಿಷ್ಟಾವಧಿಗೆ ಮುಂದೂಡಿಕೆ ಮಾಡುವ ಸಾಧ್ಯತೆ ಇದೆ.