ಮೈಸೂರು: ಸೋಮಾರಿಕಟ್ಟೆಯಲ್ಲಿ ಕುಳಿತವರಿಗೆ ಮಾಡಲು ಕೆಲಸವಿಲ್ಲದಿದ್ದರೆ ಏನಾದರೂ ಕೆತ್ತಿಕೊಂಡು ಕೂರಲಿ, ನಮ್ಮದೇನೂ ಅಭ್ಯಂತರವಿಲ್ಲ. ಆದರೆ ಸಂಸದ ಪ್ರತಾಪ್ ಸಿಂಹ ಅವರನ್ನು ಜನರು ಓಟು ಹಾಕಿ ಸಾರ್ವಜನಿಕರ ಕೆಲಸ ಮಾಡಲು ತಮ್ಮ ಪ್ರತಿನಿಧಿಯಾಗಿ ಆರಿಸಿ ಕಳಿಸಿರುವುದರಿಂದ ಖಂಡಿತವಾಗಿ ಅವರಿಗೆ ಮಾಡಲು ತುಂಬಾ ಕೆಲಸವಿದ್ದೇ ಇರುತ್ತದೆ. ಆದರೆ ಈ ಪ್ರತಾಪ ಮಾತ್ರ ಕೆಲಸ ಮಾಡುವುದನ್ನು ಬಿಟ್ಟು ವ್ಯರ್ಥಪ್ರಲಾಪದಲ್ಲೇ ಕಾಲ ಕಳೆಯುತ್ತಿರುವುದು ಅವರನ್ನಾರಿಸಿದ ಬುದ್ದಿವಂತ ಮೈಸೂರಿಗರು ಮೈ ಪರಚಿಕೊಳ್ಳುವಂತೆ ಮಾಡುತ್ತಿದೆ.
ಹಾಗಾದರೆ ಪ್ರತಾಪ್ಸಿಂಹನ ಲೇಟೆಸ್ಟ್ ಪ್ರಲಾಪ ಏನು ಅಂತೀರ? ಟಿಪ್ಪು ಎಕ್ಸ್ಪ್ರೆಸ್ ಬದಲು ಮೈಸೂರಿಗೆ ರೈಲು ಸಂಪರ್ಕ ತಂದ ಮಹಾರಾಜರ ಕೊಡುಗೆ ಪ್ರತೀಕವಾಗಿ ಒಡೆಯರ್ ಎಕ್ಸ್ಪ್ರೆಸ್ ಎಂದು ಹೆಸರಿಡುವಂತೆ ಕೇಂದ್ರ ರೈಲ್ವೆ ಸಚಿವರಿಗೆ ಸಂಸದ ಪ್ರತಾಪ್ ಸಿಂಹ ಲಿಖಿತ ಮನವಿ ಮಾಡಿದ್ದಾರೆ. ಈ ಕುರಿತು ಮಾತನಾಡಿರುವ ಅವರು ಮೈಸೂರು ರಾಜ್ಯ ಬೆಂಗಳೂರು-ಮೈಸೂರು ನಡುವೆ 1870ರಲ್ಲಿ ಯೋಜನೆ ರೂಪಿಸಲಾಯಿತು. 1882ರ ಫೆ.25ರಂದು ರೈಲ್ವೆ ಸೇವೆ ಆರಂಭವಾಯಿತು. 10ನೇ ಚಾಮರಾಜ ಒಡೆಯರ್, ನಾಲ್ವಡಿ ಕೃಷ್ಣರಾಜ ಒಡೆಯರ್ ರೈಲ್ವೆ ಅಭಿವೃದ್ಧಿಗೆ ಮಹತ್ತರ ಕಾಣಿಕೆ ನೀಡಿದ್ದಾರೆ. ಹಾಗಾಗಿ ಮೈಸೂರು-ಬೆಂಗಳೂರು ನಡುವೆ ಪ್ರತಿನಿತ್ಯ ಸೇವೆ ನೀಡುತ್ತಿರುವ ಟಿಪ್ಪು ಎಕ್ಸ್ಪ್ರೆಸ್ ಹೆಸರನ್ನು ಒಡೆಯರ್ ಎಕ್ಸ್ಪ್ರೆಸ್ ಎಂದು ಬದಲಾಯಿಸಿ ಮೈಸೂರು ಒಡೆಯರಿಗೆ ಗೌರವ ಸಲ್ಲಿಸಬೇಕೆಂದು ಕೋರಿದ್ದಾರೆ.
ರೈಲ್ವೆ ಇಲಾಖೆ ಸುಧಾರಣೆಗೆ ಏನಾದರೂ ಕೆಲಸ ಮಾಡಿ, ಏನೂ ಒಳ್ಳೆಯದು ಮಾಡಲು ಆಗದಿದ್ದರೆ, ಅಟ್ಲಿಸ್ಟ್ ಬೆಂಕಿ ಹಚ್ಚುವ ಕೆಲಸವನ್ನಾದರೂ ಮಾಡದೆ ಸುಮ್ಮನಿದ್ದರೆ ಒಳ್ಳೆಯದು ಎಂದು ಜನಸಾಮಾನ್ಯರ ಅಭಿಮತ. ಏಕೆಂದರೆ ಈಗಲೇ ಹಿಜಾಬ್ ಗಲಾಟೆಯಿಂದಾಗಿ ಕರ್ನಾಟಕ ಹೊತ್ತಿ ಉರಿಯುತ್ತಿದೆ. ಅದಕ್ಕೆ ಪ್ರತಾಪನಂಥವರು ತಮ್ಮದೂ ಒಂದಿಷ್ಟು ಇರಲಿ ಎಂದು ತುಪ್ಪ ಸುರಿಯುವ ಇಂಥ ಮೂರ್ಖ ಮಾತಾಡುತ್ತಿರುತ್ತಾರೆ. ಇವರಿಗೆ ಬುದ್ದಿ ಹೇಳುವವರು ಯಾರು?