ರಾಜ್ಯ : ಬೆಂಗಳೂರು ಅಭಿವೃದ್ಧಿಯ ಹಿನ್ನೆಲೆ ಬಜೆಟ್ ಕುರಿತು ರೂಪರೇಷೆಗಳನ್ನು ಸಿದ್ಧಪಡಿಸುವ ಪ್ರಕ್ರಿಯೆ ಕೈಗೆತ್ತಿಕೊಳ್ಳಲಾಗಿದೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತ ತಿಳಿಸಿದ್ದಾರೆ.
ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಗುಪ್ತ, ಬಿಬಿಎಂಪಿ ಬಜೆಟ್ ಮಂಡಿಸಲು ಸಿದ್ಧರಾಗಿದ್ದೇವೆ. ಇದಕ್ಕಾಗಿ ಪ್ರಕ್ರಿಯೆ ನಡೆಸಲಾಗುತ್ತಿದೆ. ಜತೆಗೆ ರಾಜ್ಯ ಸರ್ಕಾರದ ಬಜೆಟ್ ಅನ್ನು ಪರಿಗಣಿಸಿ ಎಲ್ಲ ಆದಾಯಗಳನ್ನು ಶೇಖರಿಸಿ ಉತ್ತಮ ಬಜೆಟ್ ಜನರಿಗೆ ನೀಡಲಾಗುವುದು ಎಂದು ಹೇಳಿದರು. ಹೊಸ ಯೋಜನೆ, ಅಭಿವೃದ್ಧಿ ಕಾರ್ಯಗಳಿಗೆ ಅನುದಾನ ಕುರಿತು ಜನಪ್ರತಿನಿಧಿಗಳೊಂದಿಗೆ ಸಭೆ ನಡೆಸಲಾಗುವುದು. ಈ ಸಂಬಂಧ ಸಾರ್ವಜನಿಕರ ಅಭಿಪ್ರಾಯವನ್ನು ಸಂಗ್ರಹಿಸಲಾಗುವುದು ಎಂದು ನುಡಿದರು.
ಇನ್ನು, ಬಿಬಿಎಂಪಿ ಪಾಲಿಕೆ ವಾರ್ಡ್ ವಿಂಗಡಣೆ ಹೆಸರಿನಲ್ಲಿ ಬಿಜೆಪಿ ಹಸ್ತಕ್ಷೇಪ, ಅಧಿಕಾರ ದುರುಪಯೋಗ ಮಾಡುತ್ತಿದೆ ಎಂದು ಆರೋಪಿಸಿ ಇಂದು ಕಾಂಗ್ರೆಸ್ ಪಕ್ಷದಿಂದ ಬಿಬಿಎಂಪಿ ಕೇಂದ್ರ ಕಛೇರಿಯಲ್ಲಿ ಪ್ರತಿಭಟನೆ ನಡೆದಿದೆ.
ಬಿಬಿಎಂಪಿ ವ್ಯಾಪ್ತಿಯ 198 ವಾರ್ಡಗಳನ್ನೂ 243 ವಾರ್ಡಗಳಾಗಿ ವಿಂಗಡಣೆ ಮಾಡಲಾಗಿದೆ. ಬಿಜೆಪಿ ನಾಯಕರು ತಮಗೆ ಬೇಕಾದಂತೆ ವಾರ್ಡ್ ವಿಂಗಡಣೆ ಮಾಡಿದ್ದಾರೆ. ಈ ಮೂಲಕ ಈ ಬಾರಿ ಪಾಲಿಕೆ ಗದ್ದುಗೆ ಹಿಡಿಯಲು ಬಿಜೆಪಿ ಮಾಸ್ಟರ್ ಪ್ಲಾನ್ ನಡೆಸಿದೆ. ಮಲ್ಲೇಶ್ವರ ಬಿಜೆಪಿ ಕಛೇರಿಯಲ್ಲಿ ವಾರ್ಡ್ ವಿಂಗಡಣೆ ಆಗಿದೆ. ವಾರ್ಡ್ ವಿಂಗಡಣೆ ಸಮಿತಿ ನಿಷ್ಕ್ರಿಯವಾಗಿದೆ, ಬಿಜೆಪಿ ಅಣತಿಯಂತೆ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪ ಮಾಡಿರುವ ಕಾಂಗ್ರೆಸ್ ಪಕ್ಷ, ಶಾಸಕ ರಾಮಲಿಂಗಾ ರೆಡ್ಡಿ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದ್ದಾರೆ.