ಬೆಂಗಳೂರು: ಇತ್ತೀಚೆಗೆ ಕನ್ನಡ ಧಾರಾವಹಿಗಳು ಸಿನಿಮಾವನ್ನೂ ಮೀರಿಸಿ ಜನಪ್ರಿಯವಾಗುತ್ತಿವೆ. ಹಾಗೆಯೇ ಅದರಲ್ಲಿ ನಟಿಸಿದ ನಟರೂ ಸಹ ನೇಮ್ ಅಂಡ್ ಫೇಮ್ ಪಡೆದುಕೊಳ್ಳುತ್ತಿದ್ದಾರೆ. ಹಾಗೆಯೇ ಸಿನಿಮಾರಂಗದ ಎಲ್ಲ ದುರಹಂಕಾರಗಳೂ ಕಿರುತೆರೆಯ ನಟರಲ್ಲಿ ಕಾಣಿಸಿಕೊಳ್ಳುತ್ತಿದೆ. ಅದಕ್ಕೆ ಉದಾಹರಣೆಯಾಗಿ ಇಂದು ಗಟ್ಟಿಮೇಳ ಧಾರಾವಾಹಿಯ ನಟ ನಟಿಯರು ಬಾರೊಂದರಲ್ಲಿ ಕುಡಿದು ಗಲಾಟೆ ಮಾಡಿ, ಪೊಲೀಸರ ಅತಿಥಿಯಾದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಕಿರುತೆರೆ ಧಾರಾವಾಹಿಯಾದ ಗಟ್ಟಿಮೇಳದ ನಟರಾದ ರಕ್ಷಿತ್, ರಂಜನ್, ಅನುಷಾ, ಅಭಿಷೇಕ್, ಶರಣ್ಯ ಸೇರಿದಂತೆ 7 ಜನರ ಮೇಲೆ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ. ನಾಗರಬಾವಿ ಬಳಿ ಚಿತ್ರೀಕರಣ ನಡೆಸುತ್ತಿದ್ದ ಕಿರುತೆರೆ ಚಿತ್ರತಂಡ ಅಲ್ಲಿಂದ ಕೆಂಗೇರಿ ಬಳಿಯಿರುವ ಜಿಂಜರ್ ಲೇಕ್ ವ್ಯೂ ಹೋಟೆಲ್ಗೆ ಬಂದಿತ್ತು. ಅಲ್ಲಿ ಮಧ್ಯರಾತ್ರಿ ಒಂದು ಗಂಟೆಯಾದರೂ ಕುಡಿದು ತಿಂದು ಜಾಗ ಖಾಲಿ ಮಾಡದೆ ಗಲಾಟೆ ಮಾಡತೊಡಗಿದಾಗ ಸ್ಥಳೀಯರು ಇಲ್ಲಿ ಕೆಲವರು ರಾತ್ರಿ ಒಂದು ಗಂಟೆಯಾದರೂ ಕುಡಿದು ಗಲಾಟೆ ಮಾಡುತ್ತಿದ್ದಾರೆ ಎಂದು ಹೊಯ್ಸಳಕ್ಕೆ ಫೋನ್ ಮಾಡಿ ಕರೆದಿದ್ದಾರೆ. ಅಲ್ಲಿಗೆ ಪೊಲೀಸರು ಬಂದಾಗ ನಟ ರಕ್ಷಿತ್ ಮತ್ತು ಗ್ಯಾಂಗ್ ಪೊಲೀಸರೊಂದಿಗೂ ಗಲಾಟೆಗೆ ತೊಡಗಿ ರಂಪಾಟ ಮಾಡಿದ್ದಾರೆ. ಹೀಗೆ ಪೊಲೀಸರೊಂದಿಗೆ ಚಕಮಕಿಗೆ ಇಳಿದ ನಟ ನಟಿಯರನ್ನು ಅಲ್ಲಿಂದ ಎಳೆದೊಯ್ದ ಪೊಲೀಸರು ಅವರಿಗೆ ವೈದ್ಯಕೀಯ ಪರೀಕ್ಷೆ ಮಾಡಿಸಿ NDMA ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.