ಮೊನ್ನೆ ಮೊನ್ನೆಯಷ್ಟೆ ಸ್ಪೋಟಗೊಂಡ ಟೊಂಗಾ ಜ್ವಾಲಮುಖಿ ಜಗತ್ತಿನಾದ್ಯಂತ ಸಾಕಷ್ಟು ಸುದ್ದಿ ಮಾಡಿತ್ತು, ಅದಕ್ಕೆ ಕಾರಣ ಆ ಜ್ವಾಲಾಮುಖಿಯ ತೀವ್ರತೆ, ಈ ಜ್ವಾಲಮುಖಿ ಸ್ಪೋಟಗೊಂಡಾಗ ಅದರ ತೀವ್ರತೆ ಎಷ್ಟಿತ್ತು ಅನ್ನೋದು ಉಪಗ್ರಹದಲ್ಲಿ ಕೂಡ ದಾಖಲಾಗಿದೆ. ಹಾಗಾಗಿ ಹಲವು ದೇಶಗಳಲ್ಲಿ ಸುನಾಮಿಯ ಭೀತಿ ಕೂಡ ಎದುರಾಗಿತ್ತು. ಕೆಲ ದೇಶಗಳಲ್ಲಿ ಸಣ್ಣ ಪ್ರಮಾಣದ ಸುನಾಮಿ ರೀತಿಯಾದ ಅಲೆಗಳು ಸೃಷ್ಟಿಯಾಗಿ ಸಲ್ಪ ಪ್ರಮಾಣದ ನಷ್ಟಗಳು ಕೂಡ ಆಗಿದ್ದುವು, ಇಲ್ಲಿಗೆ ಸಮಸ್ಯೆ ಎಲ್ಲವೂ ಮುಗಿದು ಹೋಗಿದೆ ಎಂದು ಎಲ್ಲರೂ ಅಂದು ಕೊಂಡಿದ್ರು ಆದ್ರೆ ಈಗ ಪರಿಸ್ಥಿತಿ ಬಹಳ ಕೆಟ್ಟದಾಗಿದ್ದು, ಟೊಂಗಾ ಜ್ವಾಲಮುಖಿ ಸ್ಪೋಟದಿಂದಾಗಿ ಇನ್ನಷ್ಟು ಸಮಸ್ಯೆ ಉದ್ಭವಿಸಬಹುದು ಎಂದು ಹೇಳಲಾಗ್ತಾ ಇದೆ.
ಪೆಸಿಫಿಕ್ ಸಾಗರದ ದ್ವೀಪ ದೇಶ ಟೊಂಗಾದಲ್ಲಿ ಇತ್ತೀಚೆಗೆ ಸ್ಫೋಟಿಸಿದ ಜ್ವಾಲಾಮುಖಿಯು ಸಾಕಷ್ಟು ಸುದ್ಧಿ ಮಾಡ್ತಾ ಇದೆ. ಈ ಬಗ್ಗೆ ಇದೀಗ ವಿಜ್ಞಾನಿಗಳು, ಜಾಗತಿಕ ಇತಿಹಾಸದಲ್ಲಿ ಕಾಣಿಸಿಕೊಂಡ ಅತ್ಯಂತ ಭೀಕರ ಜ್ವಾಲಾಮುಖಿಗಳಲ್ಲಿ ಒಂದು ಅಂತ ನಾಸಾ ಹೇಳಿದೆ. ಇದರ ತೀವ್ರತೆಯ ಬಗ್ಗೆ ಹೇಳಿಕೆ ನೀಡಿರುವ ನಾಸಾ, ವಿಶ್ವ ಮಹಾಯುದ್ಧದ ವೇಳೆ ಜಪಾನ್ ಮೇಲೆ ಅಮೆರಿಕ ಹಾಕಿದ್ದ ಅಣುಬಾಂಬ್‌ಗಿಂತ, ಈ ಜ್ವಾಲಾಮುಖಿ ಸ್ಪೋಟ ನೂರು ಪಟ್ಟು ಹೆಚ್ಚಿನ ಶಕ್ತಿಯನ್ನಈ ಜ್ವಾಲಾಮುಖಿ ಬಿಡುಗಡೆ ಗೊಳಿಸಿದೆ ಅನ್ನೋದನ್ನ ವಿಜ್ಞಾನಿಗಳು ಖಚಿತ ಪಡಿಸಿದ್ದಾರೆ.
ಇನ್ನು ಈ ಜ್ವಾಲಾಮುಖಿ ಜನವರಿ15ರಂದು ಟೊಂಗಾ ದ್ವೀಪದ ಬಳಿ ಸ್ಫೋಟವಾಗಿತ್ತು. ಸುಮಾರು 1 ಲಕ್ಷಕ್ಕೂ ಅಧಿಕ ಮಂದಿ ವಾಸಿಸುವ ದ್ವೀಪ ದೇಶದಲ್ಲಿ, ಏಕಾಏಕಿ ಭುಗಿಲೆದ್ದ ಜ್ವಾಲಾಮುಖಿಯಿಂದ ಸುತ್ತಲಿನ ಕೆಲ ದೇಶಗಳಲ್ಲಿ ಸಣ್ಣ ಪ್ರಮಾಣಲ್ಲಿ ಸುನಾಮಿ ಅಲೆಗಳು ಉಂಟಾಗಿತ್ತು. ಸದ್ಯಕ್ಕೆ ಈ ಜ್ವಾಲಾಮುಖಿ ಸ್ಪೋಟ ಹೆಚ್ಚು ಅನಾಹುತವನ್ನ ಉಂಟು ಮಾಡದೇ ಇದ್ರು, ಇದರಿಂದ ಉಂಟಾಗಬಹುದಾದ ಆಪತ್ತುಗಳು ಭವಿಷ್ಯದಲ್ಲಿ ಭಾರೀ ಪರಿಣಾಮವನ್ನ ಸೃಷ್ಟಿಸಲಿದೆ ಅಂತ ಹೇಳಲಾಗ್ತಾ ಇದೆ. ಹೌದು.. ಟೊಂಗಾ ಜ್ವಾಲಾಮುಖಿಯು ಸಿಡಿಯುವ ಸಮಯದಲ್ಲಿ ಸುಮಾರು 40 ಕಿ.ಮೀ. ಎತ್ತರಕ್ಕೆ ವಾತಾವರಣದಲ್ಲಿ ಬೂದಿ ಹಾಗೂ ಕಸವನ್ನ ಉಗುಳಿದೆ. ಇದರ ಪರಿಣಾಮವಾಗಿ ಬಹುತೇಖ ಟೊಂಗಾ ದೇಶದ ಜನರು ಈಗ ಅನಾರೋಗ್ಯ ಸೇರಿದಂತೆ ನಾನಾ ರೀತಿಯ ಸಮಸ್ಯೆಗೆ ಒಳಪಟ್ಟಿದ್ದಾರೆ
ವಿಜ್ಞಾನಿಗಳು ಹೇಳುವ ಪ್ರಕಾರ, 2ನೇ ಮಹಾಯುದ್ಧದಲ್ಲಿ ಜಪಾನ್‌ನ ಹಿರೋಶಿಮದ ಮೇಲೆ ಅಮೆರಿಕ ಹಾಕಿದ ಅಣುಬಾಂಬ್ ಇದ್ಯಲ್ಲ ಅದು, ಸುಮಾರು 15 ಕಿಲೋಟನ್ ಅಂದ್ರೆ15 ಸಾವಿರ ಟನ್ ಸಮಾರ್ಥ್ಯದಷ್ಟು ಶಕ್ತಿಯನ್ನ ಹೊಂದಿತ್ತು. ಆದರೆ ಈ ಟೊಂಗಾ ಜ್ವಾಲಾಮುಖಿ 5ರಿಂದ 30 ಮೆಗಾಟನ್ ಅಂದ್ರೆ ಸುಮಾರು 50 ಲಕ್ಷದಿಂದ 3 ಕೋಟಿ ಟನ್ ಶಕ್ತಿ ಉಗುಳಿರುವ ಸಾಧ್ಯತೆ ಇದೆ ಅಂತ ವಿಜ್ಞಾನಿಗಳು ಹೇಳ್ತಾ ಇದ್ದಾರೆ. ಇದೀಗ ವಾತವರಣವನ್ನ ಸೇರಿರುವ ಅದರ ಬೂದಿ ಹಾಗೂ ತ್ಯಾಜ್ಯದಿಂದ ಟೊಂಗಾದ 65 ಕಿ.ಮೀ. ಭೂಭಾಗ ನಿಷ್ಪ್ರಯೋಜಕವಾಗಿದೆಯಂತೆ. ಇದರ ಜೊತೆ ಎರಡು ಹಳ್ಳಿಗಳು ಸಂಪೂರ್ಣ ನಾಶವಾಗಿದೆ ಅಂತ ದೃಢಪಡಿಸಲಾಗಿದೆ. ವಿಷಪೂರಿತ ಬೂದಿಯಿಂದ ಕೃಷಿ ಭೂಮಿಗಳು ಸಂಪೂರ್ಣವಾಗಿ ಹಾಳಾಗಿದ್ದು, ಕುಡಿಯುವ ನೀರು ಕೂಡ ವಿಷಪೂರಿತವಾಗಿ ಎಲ್ಲೆಡೆ ಅನಾರೋಗ್ಯ ಸಮಸ್ಯೆ ಕಾಣಿಸಿಕೊಳ್ಳುತ್ತಿದೆ ಅಂತ ವಿಜ್ಞಾನಿಗಳು ಆತಂಕವನ್ನ ವ್ಯಕ್ತ ಪಡಿಸ್ತಾ ಇದ್ದಾರೆ
ಇನ್ನು ಘಟನೆ ನಡೆದು 10 ದಿನ ಕಳೆದ್ರು ವಾತಾವರಣದಲ್ಲಿ ಜ್ವಾಲಾಮುಖಿಯ ಬೂದಿ ಹಾಗೆ ಇದೆ. ಇದರ ಪರಿಣಾಮವಾಗಿ, ಟೊಂಗಾದ ಜನರ ಕಣ್ಣು, ಮೂಗು ಹಾಗೂ ಬಾಯಿಗೆ ಬೂದಿ ಅಂಶಗಳು ಸೇರುತ್ತಿದೆ ಅಂತ ಸ್ಥಳೀಯರು ಹೇಳ್ತಾ ಇದ್ದಾರೆ. ಇದು ಜನರಲ್ಲಿ ಹಲವು ಕಾಯಿಲೆಗಳನ್ನ ತರಬಹುದು ಅಂತ ಹೇಳಲಾಗ್ತಾ ಇದ್ದು, ಈಗಾಗ್ಲೆ ಕೆಲ ಮಂದಿಗೆ ಬಾಯಿಯಲ್ಲಿ ಹುಣ್ಣು, ತುರಿಕೆ ಹಾಗು ಕೆಮ್ಮಿನ ಸಮಸ್ಯೆಗಳು ಕಾಣಿಸಿಕೊಂಡಿವೆ. ಈ ಬಗ್ಗೆ ಅಭಿಪ್ರಾಯ ವ್ಯಕ್ತ ಪಡಿಸಿರುವ ವೈದ್ಯರು ಕೆಲವರಲ್ಲಿ ಶ್ವಾಸಕೋಶದಲ್ಲಿ ಸೋಂಕು ಪತ್ತೆಯಾಗಿದ್ದು, ಇದು ಜೀವನ ಪರ್ಯಂತ ಕಾಡುವ ಸಮಸ್ಯೆಯಾಗಿ ಕೂಡ ಮಾರ್ಪಾಡಾಗ ಬಹುದು ಎಂದು ವೈದ್ಯರು ಅಭಿಪ್ರಾಯ ಪಟ್ಟಿದ್ದಾರೆ.
ಇನ್ನೂ ಟೊಂಗಾ ಜ್ವಾಲಾಮುಖಿ ಸ್ಪೋಟದ ವೇಳೆ ಟೋಂಗಾದ ತೀರ ಪ್ರದೇಶಗಳಿಗೆ ನೀರು ನುಗ್ಗಿದೆ, ಪೆಸಿಫಿಕ್ ಸಾಗರದಲ್ಲಿರುವ ಹಲವು ದೇಶಗಳಲ್ಲೂ ಎತ್ತರದ ಅಲೆಗಳು ಕಂಡುಬಂದಿವೆ. ಇನ್ನು ಜ್ವಾಲಾಮುಖಿಯಿಂದ 63 ಸಾವಿರ ಅಡಿ ಎತ್ತರಕ್ಕೆ ಬೂದಿ ಚಿಮ್ಮಿದ ಪರಿಣಾಮ, ಇದರಿಂದ ಸಿಡಿದೆದ್ದಿರುವ ಕಲ್ಲು ಹಾಗೂ ಬೂದಿ ಮನೆ ಮೇಲೆ ಕೂಡ ಬಿದ್ದಿವೆ. ಸದ್ಯಕ್ಕೆ ಈ ಒಂದು ಜ್ವಾಲಾಮುಖಿ ಸ್ಪೋಟ ಟೋಂಗಾದಿಂದ 10 ಸಾವಿರ ಕಿ.ಮೀ. ದೂರದಲ್ಲಿರುವ ಚಿಲಿ ಸಮುದ್ರ ತೀರದಲ್ಲಿ ಅಲೆಯ ಪ್ರಮಾಣವನ್ನ ಏರಿಸಿದೆ. ಪೆಸಿಫಿಕ್ ಕರಾವಳಿಯಲ್ಲಿರುವ ಮೆಕ್ಸಿಕೋ ಹಾಗೂ ಅಲಾಸ್ಕಾದಲ್ಲೂ ಅಲೆಗಳು ಎತ್ತರದಲ್ಲಿ ಏರಿಕೆಯಾಗಿದೆ. ಜಪಾನ್ನಲ್ಲಿ ಕೂಡ 4 ಅಡಿ ಎತ್ತರದ ಅಲೆಗಳು ಸೃಷ್ಟಿಯಾಗಿವೆ. ಸದ್ಯದ ಪಟ್ಟಿಗೆ ಭೂಮಿಯ ಒಳ ಪದರದಲ್ಲಿ ಶಿಲಾಪದರಗಳು ಚಲಿಸತ್ತಲೇ ಇದ್ದರೆ ಸಮುದ್ರದ ಅಲೆಗಳ ಏರಿಕೆ ಕೆಲ ದಿನಗಳ ಕಾಲ ಹೀಗೆ ಇರುವ ಸಾಧ್ಯತೆ ಇದೆ ಅಂತ ವಿಜ್ಞಾನಿಗಳು ಅಭಿಪ್ರಾಯ ಪಟ್ಟಿದ್ದಾರೆ.
ಒಟ್ಟಾರೆಯಾಗಿ ಈ ಟೊಂಗಾ ಜ್ವಾಲಾಮುಖಿ ಸೃಷ್ಠಿಸಿದ ಅವಾಂತರದಿಂದ ಜನರು ಆತಂಕಕ್ಕೆ ಒಳಗಾಗಿದ್ದಾರೆ. ಸದ್ಯಕ್ಕೆ ಬಾಹ್ಯ ಜಗತ್ತಿನಿಂದ ಸಂಪರ್ಕ ಕಡಿದುಕೊಂಡಿರುವ ಟೊಂಗಾ ಜನತೆಗೆ ಜಪಾನ್, ಆಸ್ಟ್ರೇಲಿಯಾ, ನ್ಯೂಜಿಲ್ಯಾಂಡ್ ಸೇರಿದ ಹಾಗೆ ಹಲವು ದೇಶಗಳು ಸಹಾಯ ಹಸ್ತವನ್ನ ನೀಡಿದ್ದು, ಟೊಂಗಾ ದ್ವೀಪ ರಾಷ್ಟ್ರ ಮತ್ತೆ ಮೊದಲಿನಂತಾಗಲಿ ಅನ್ನೋದೇ ಎಲ್ಲರ ಆಶಯವಾಗಿದೆ.
ಲಿಖಿತ್ ರೈ, ಪವರ್ ಟಿವಿ